ಬಿಜೆಪಿಯ ಯಾವ ನಾಯಕರೂ ಆಸ್ತಿ ಮಾಡಿಲ್ಲವೇ?, ಕಾಂಗ್ರೆಸ್ ನಾಯಕರನ್ನೇ ಇ.ಡಿ ಟಾರ್ಗೆಟ್ ಮಾಡುತ್ತಿರುವುದೇಕೆ?: ಜಮೀರ್ ಅಹ್ಮದ್ ಖಾನ್

Prasthutha|

ಬೆಂಗಳೂರು: ಒಮ್ಮೆ ಮುಚ್ಚಲ್ಪಟ್ಟ ಪ್ರಕರಣವನ್ನು ಪುನಃ ಕೆದಕಿ ನಮ್ಮ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರನ್ನು ಇಂದು ಮತ್ತೆ ಇ.ಡಿ ವಿಚಾರಣೆಗೆ ಒಳಪಡಿಸಿರುವುದು ಖಂಡನೀಯ. ಬಿಜೆಪಿ ಸರ್ಕಾರದ ರಾಜಕೀಯ ಪ್ರೇರಿತ ದಾಳಿ ಮತ್ತು ನಮ್ಮ ನಾಯಕರಿಗೆ ನೀಡುತ್ತಿರುವ ಮಾನಸಿಕ ಕಿರುಕುಳ ನಿಲ್ಲುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಚಾಮರಾಜಪೇಟೆ ಶಾಸಕ ಮತ್ತು ಮಾಜಿ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಹೇಳಿದರು.

- Advertisement -

ಪದೇ ಪದೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂದಿ ಅವರ ಮೇಲೆ ನಡೆಯುತ್ತಿರುವ ಇ.ಡಿ ದಾಳಿಯನ್ನು ಖಂಡಿಸಿ ಇಂದು ನಗರದ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತನಿಖಾ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಕಳೆದ ತಿಂಗಳು ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಇ.ಡಿ ತನಿಖೆಯ ನೆಪದಲ್ಲಿ ಇನ್ನಿಲ್ಲದ ರೀತಿಯಲ್ಲಿ ಮಾನಸಿಕ ಹಿಂಸೆ ನೀಡಿದ್ದರು. ಇಂದು ಮತ್ತೆ ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ನಮ್ಮಕರ್ನಾಟಕದ ವಿಚಾರದಲ್ಲೂ ಅಷ್ಟೇ, ಬಿಜೆಪಿ ನಾಯಕರಿಗೆ ನಾನು ಮತ್ತು ಡಿ.ಕೆ ಶಿವಕುಮಾರ್ ಅವರು ಮಾತ್ರ ಕಾಣುತ್ತೇವೆ. ನಾನು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕೇಳಬಯಸುವುದೇನೆಂದರೆ, ನಿಮ್ಮ ಬಿಜೆಪಿ ನಾಯಕರಲ್ಲಿ ಯಾರೊಬ್ಬರೂ ಹಣ, ಆಸ್ತಿ ಮಾಡಿಲ್ಲವೇ? ಅವರನ್ನು ಏಕೆ ಇದುವರೆಗೂ ವಿಚಾರಣೆಗೆ ಒಳಪಡಿಸಿಲ್ಲ ಎಂದು ಶಾಸಕ ಜಮೀರ್ ಸರ್ಕಾರವನ್ನು ಪ್ರಶ್ನಿಸಿದರು.

- Advertisement -

ನನ್ನನ್ನು ಕಳೆದ ವರ್ಷ ಆಗಸ್ಟ್ 5 ರಂದು ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದರು. ಅವರು ಕೇಳಿದ ಪ್ರತಿಯೊಂದು ದಾಖಲೆಗಳನ್ನು ನಾನು ಒದಗಿಸಿದ್ದೇನೆ ಮತ್ತು ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಆದರೂ, ನನ್ನ ಪ್ರಕರಣವನ್ನು ಪುನಃ ಸ್ಥಳೀಯ ಎಸಿಬಿಗೆ ಒಪ್ಪಿಸಿದ್ದೇಕೆ? ಹಾಗಿದ್ದರೆ ಇ.ಡಿ, ಎಸಿಬಿಗಿಂತ ವೀಕ್ ಆಗಿದೆ ಎಂದರ್ಥವೇ ಎಂದು ಪ್ರಶ್ನಿಸಿದ ಅವರು, ಇದೆಲ್ಲ ಕೇವಲ 2023ರ ಚುನಾವಣಾ ಗಿಮಿಕ್. ನಾವು ನ್ಯಾಯವಾಗಿದ್ದೇವೆ. ಬಿಜೆಪಿಯ ದುರುದ್ದೇಶಪೂರಿತ ಮತ್ತು ರಾಜಕೀಯ ಪ್ರೇರಿತ ದಾಳಿ ಅಸ್ತ್ರಕ್ಕೆ ನಾವು ಕುಗ್ಗುವುದಿಲ್ಲ. ನಾವೆಲ್ಲರೂ ನಮ್ಮ ನಾಯಕರ ಜೊತೆ ಇದ್ದೇವೆ ಎಂದು ಅವರು ಪ್ರತಿಕ್ರಿಯಿಸಿದರು.

Join Whatsapp