ಚಾಮರಾಜನಗರ: ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ಕಾಣಿಸಿಕೊಂಡು, ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ದೊರಕದ ಹಿನ್ನೆಲೆಯಲ್ಲಿ ಕುಟುಂಬಿಕರು ಡೋಲಿ ಕಟ್ಟಿ 8 ಕಿಮೀ ಹೊತ್ತು ಸಾಗಿಸಿರುವ ಘಟನೆ ಹನೂರು ತಾಲೂಕಿನ ದೊಡ್ಡಾಣೆ ಗ್ರಾಮದಲ್ಲಿ ನಡೆದಿದೆ.
ದೊಡ್ಡಾಣೆ ಗ್ರಾಮದ ಶಾಂತಲಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಯಾವುದೇ ಸಾರಿಗೆ ಸಂಪರ್ಕ ಲಭಿಸದೇ 8 ಕಿಮೀ ದೂರದ ಮಾರ್ಟಳ್ಳಿ ಆಸ್ಪತ್ರೆಗೆ ಡೋಲಿಯಲ್ಲಿ ಸಾಗಿಸಿದ್ದಾರೆ. ಆಂಬುಲೆನ್ಸ್ ಚಾಲಕನಿಗೆ ಮತ್ತು ಅಧಿಕಾರಿಗಳಿಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಬಂದಿದ್ದರಿಂದ ಡೋಲಿ ಮೂಲಕ ಹೊತ್ತು ಸಾಗಿಸಿದ್ದಾರೆ ಎನ್ನಲಾಗಿದೆ.
ಮಲೆ ಮಹದೇಶ್ವರಬೆಟ್ಟ ತಪ್ಪಲಿನ ಅರಣ್ಯ ಗ್ರಾಮಸ್ಥರ ಅನುಕೂಲಕ್ಕಾಗಿ ಜನವನ ಸಾರಿಗೆ ವ್ಯವಸ್ಥೆ ಜಾರಿಗೆ ತಂದಿರುವ ಅರಣ್ಯ ಇಲಾಖೆ ಗರ್ಬಿಣಿಯರು, ಅನಾರೋಗ್ಯ ಪೀಡಿತರು, ಶಾಲಾ ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರ ತುರ್ತು ಬಳಕೆಗೆ ಜಾರಿಗೆ ತಂದಿರುವ ಜನವನ ಸಾರಿಗೆ ಸೌಲಭ್ಯ ಇದ್ದೂ ಇಲ್ಲದಂತಾಗಿದೆ.ಅಧಿಕಾರಿಗಳ ಈ ದಿವ್ಯ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಂಬ್ಯುಲೆನ್ಸ್ ಇದ್ದೂ ಇಲ್ಲದಂತಾಗಿದ್ದು ಗ್ರಾಮಸ್ಥರನ್ನು ಘಾಸಿ ಮಾಡಿದೆ. ವಾಹನ ಚಾಲಕರು, ಅಧಿಕಾರಿಗಳು ಮೊಬೈಲ್ ಆಫ್ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವುದು ಅವರ ಜವಾಬ್ದಾರಿ ಆಗಬೇಕು ಎಂದು ಗ್ರಾಮಸ್ಥರು ವಿನಂತಿಸಿದ್ದಾರೆ.
ಕರ್ನಾಟಕದ ಹಲವು ಗ್ರಾಮೀಣ ಭಾಗದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸರಕಾರಗಳು ವಿಫಲವಾಗುತ್ತಿವೆ.