Home ಟಾಪ್ ಸುದ್ದಿಗಳು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎಸ್ಪಿ, ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ: ಸಮಾಜವಾದಿ ಪಕ್ಷ ಘೋಷಣೆ

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎಸ್ಪಿ, ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ: ಸಮಾಜವಾದಿ ಪಕ್ಷ ಘೋಷಣೆ

ಲಕ್ನೋ: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎಸ್ಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಮತ್ತು ಪ್ರಸಕ್ತ ಅಸ್ವಿತ್ವದಲ್ಲಿರುವ ಮಿತ್ರ ಪಕ್ಷಗಳ ಸಹಕಾರದೊಂದಿಗೆ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ಪಕ್ಷವು ಸಮರ್ಥವಾಗಿದೆ ಎಂದು ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಅಸ್ತಿತ್ವದಲ್ಲಿರುವ ತನ್ನ ಮಿತ್ರ ಪಕ್ಷಗಳೊಂದಿಗೆ ಸೇರಿಕೊಂಡು ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ಸಮರ್ಥವಾಗಿದೆ. ಸದ್ಯ ದೇಶದ ಜನರು ಬಿಜೆಪಿ ಸರ್ಕಾರದ ವಿರುದ್ಧ ಒಲವು ಹೊಂದಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಬಿಎಸ್ಪಿ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ತಿಳಿಸಿದರು.

2017ರ ಅಸೆಂಬ್ಲಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು, ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ 105 ಸ್ಥಾನಗಳನ್ನು ಬಿಟ್ಟು ಕೊಟ್ಟರೂ ಕೂಡ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು, ಬಿಎಸ್ಪಿ ಪಕ್ಷದೊಂದಿಗೆ ಮಹಾಮೈತ್ರಿಯನ್ನು ರಚಿಸಿದ್ದು, ಬಿಜೆಪಿಯ ಬೆಳವಣಿಗೆಯನ್ನು ತಡೆಯಲು ಸಾಧ್ಯವಾಗಿರಲಿಲ್ಲ.

ಇನ್ನುಳಿದಂತೆ 2022ರ ಅಸೆಂಬ್ಲಿ ಚುನಾವಣೆಯಲ್ಲಿ ಸಮಾಜವಾದಿ ಮಿತ್ರಕೂಟವು ಶೇಕಡಾ 36 ಕ್ಕಿಂತಲೂ ಹೆಚ್ಚಿನ ಮತಗಳನ್ನು ಪಡೆದಿತ್ತು. ಬಿಜೆಪಿಯ ಎಲ್ಲಾ ತಂತ್ರಗಳ ಹೊರತಾಗಿಯೂ ನಮ್ಮ ಪಕ್ಷವು 24 ಸಂಸತ್ ಸ್ಥಾನಗಳಲ್ಲಿ ಮುಂದಿತ್ತು ಎಂದು ಚೌಧರಿ ಮಾಧ್ಯಮಗಳಿಗೆ ತಿಳಿಸಿದರು.

Join Whatsapp
Exit mobile version