ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ; ಬಿಜೆಪಿ ಸೇರಿ ಯಾರ ಜತೆಯೂ ಮೈತ್ರಿ ಇಲ್ಲ:ಎಚ್ ಡಿಕೆ

Prasthutha|

► ಪಕ್ಷ ಸಂಘಟನೆಗೆ ತೊಂದರೆಯಾಗದಂತೆ ಸ್ಥಳೀಯ ಮಟ್ಟದಲ್ಲಿ ನಿರ್ಧಾರ

- Advertisement -

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಸೇರಿದಂತೆ ಯಾವ ಪಕ್ಷದ ಜತೆಯೂ ಜೆಡಿಎಸ್ ಮೈತ್ರಿ ಇಲ್ಲ ಎಂದು ಪಕ್ಷದ ವರಿಷ್ಠ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.


ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆಯಲ್ಲಿ ನಿಗದಿತ ಗುರಿ ತಲುಪಲು ಅನುಕೂಲ ಆಗುವಂತೆ ಪಕ್ಷವು ಸ್ಪರ್ಧೆ ಮಾಡದಿರುವ 19 ಕ್ಷೇತ್ರಗಳಿಗೆ ಸ್ಥಳೀಯ ಮಟ್ಟದಲ್ಲಿಯೇ ನಿರ್ಧಾರ ಕೈಗೊಳ್ಳುವಂತೆ ಪಕ್ಷದ ಮತದಾರರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

- Advertisement -


ವಿಧಾನ ಪರಿಷತ್ ಚುನಾವಣೆ ಘೋಷಣೆ ಆದಾಗಿನಿಂದ ಜೆಡಿಎಸ್ ಬಗ್ಗೆ ಒಂದಲ್ಲ ಒಂದು ಊಹೆಯ ಸುದ್ದಿಗಳು ಹರಿದಾಡುತ್ತಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಪಕ್ಷದ ಬೆಂಬಲ ಕೇಳಿದ ಮೇಲೆ ಮತ್ತಷ್ಟು ಊಹಾಪೋಹಗಳಿಗೆ ದಾರಿ ಆಯಿತು. ಅದೆಕ್ಕೆಲ್ಲ ತೆರೆ ಎಳೆಯುವ ನಿಟ್ಟಿನಲ್ಲಿ ಪಕ್ಷವು ತನ್ನ ಮತದಾರರಿಗೆ ಇಂದು ಸ್ಪಷ್ಟ ಸಂದೇಶ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಈಗ ವಿಧಾನ ಪರಿಷತ್ ಚುನಾವಣಾ ಪ್ರಚಾರದ ಅಂತಿಮ ಹಂತಕ್ಕೆ ಬಂದಿದ್ದೇವೆ. ಈ ಚುನಾವಣೆಯಲ್ಲಿ ಜೆಡಿಎಸ್ ನಿಲುವಿನ ಬಗ್ಗೆ ಸಾಕಷ್ಟು ಕುತೂಹಲ ಮೂಡಿತ್ತು. ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ಊಹಪೊಹ ಸುದ್ದಿಗಳು ಭಾರೀ ಪ್ರಮಾಣದಲ್ಲಿ ಹರಡಿವೆ. ಕೆಲವರು ಇಂಥ ಸುದ್ದಿಗಳನ್ನು ಹರಡುವಂತೆ ಮಾಡಿದ್ದರು. ಎಂದಿನಂತೆ ಈ ಚುನಾವಣೆ ಘೋಷಣೆ ಅದ ಮೇಲೆಯೂ ಕಾಂಗ್ರೆಸ್ ನಾಯಕರು; ಜೆಡಿಎಸ್ ಪಕ್ಷವು ಬಿಜೆಪಿ ಬಿ ಟೀಮ್ ಎಂದು ಹೇಳುತ್ತಿದ್ದಾರೆ.

ಅಲ್ಲದೆ, ಜೆಡಿಎಸ್ ಆರು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಿ ಬೇರೆ ಕಡೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ನಡೆಸುತ್ತಿರುವ ಅಪಪ್ರಚಾರ ಒಂದು ಕಡೆಯಾದರೆ, ಇನ್ನೊಂದೆಡೆ ಬಿಜೆಪಿ ಪಕ್ಷದಿಂದ ನಮಗೆ ಯಾವುದೇ ಬೆಂಬಲದ ಕೋರಿಕೆ ಬಂದಿಲ್ಲ. ಆದರೆ, ಯಡಿಯೂರಪ್ಪ ಅವರು ಜೆಡಿಎಸ್ ಅಭ್ಯರ್ಥಿಗಳು ಇಲ್ಲದ ಕಡೆ ನಮಗೆ ಬೆಂಬಲ ನೀಡಿ ಎಂದು ಹೇಳಿದ್ದಾರೆ. ಆದರೆ ಬಿಜೆಪಿ ಬೆಂಬಲ ಕೇಳಿಲ್ಲ.

ಗೌರವಯುತವಾಗಿ ಬೆಂಬಲ ಕೇಳಿದ ಯಡಿಯೂರಪ್ಪ ಅವರಿಗೆ ನಾವೂ ಅಷ್ಟೇ ಗೌರವದಿಂದ ಸ್ವತಂತ್ರ ಸ್ಪರ್ಧೆ ಬಗ್ಗೆ ಹೇಳುತ್ತಿದ್ದೇನೆ. ನಮಗೆ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ಶತ್ರುಗಳೇ. ಎರಡೂ ಪಕ್ಷಗಳ ಜತೆ ಸಮಾನಾಂತರ ಹೋರಾಟ ನಡೆಸುತ್ತೇವೆ. ಆರಕ್ಕೆ ಆರೂ ಕ್ಷೇತ್ರಗಳನ್ನೂ ಗೆಲ್ಲುತ್ತೇವೆ. ನನ್ನ ಈಗಿನ ತೀರ್ಮಾನ ಯಾರಿಗೆ ಅಸ್ತ್ರ ಆಗುತ್ತದೆ ಅನ್ನೋದು ತಾತ್ಕಾಲಿಕ. ಕಾಲಚಕ್ರ ಹೀಗೆ ಇರೋದಿಲ್ಲ. ಕಾಂಗ್ರೆಸ್ ನಾಯಕರ ಪ್ರಮಾಣಪತ್ರ ನನಗೆ ಬೇಕಿಲ್ಲ. ಅದೇನೇ ಇದ್ದರೂ ಯಡಿಯೂರಪ್ಪ ಮುತ್ಸದ್ದಿತನದಿಂದಲೇ ನಮ್ಮ ಬೆಂಬಲ ಕೇಳಿದ್ದಾರೆ. ನಾವು ಕೂಡ ಮುತ್ಸದ್ದಿತನದಿಂದಲೇ ಈ ನಿರ್ಧಾರ ಮಾಡಿದ್ದೇವೆ ಎಂದರು.

ಈಗಲೂ ಸಹ ಯಡಿಯೂರಪ್ಪ ನಮ್ಮ ಪಕ್ಷದ ಬೆಂಬಲ ಕೇಳಿದ್ದಾರೆ. ಅವರ ಪಕ್ಷದ ಅಭ್ಯರ್ಥಿಗಳಿಗೆ ಶಕ್ತಿ ತುಂಬಲು ಬೆಂಬಲ ಕೋರಿದ್ದಾರೆ. ಅವರು ಮೊಬೈಲ್ ಕರೆ ಮಾಡಿಯೂ ಮಾತನಾಡಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೋ ಅಥವಾ ಬಿಜೆಪಿ ಗೆಲ್ಲುತ್ತೊ ಎನ್ನುವ ಪ್ರಶ್ನೆ ಅಲ್ಲ. ಪಕ್ಷ ಸಂಘಟನೆ ಯಾವುದೇ ತೊಂದರೆ ಆಗದಂತೆ ಸ್ಥಳೀಯ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. 2023ಕ್ಕೆ 123 ಸ್ಥಾನ ಗೆಲ್ಲಬೇಕು ಎನ್ನುವುದು ನಮ್ಮ ಗುರಿ.


ನಾವು ಅಭ್ಯರ್ಥಿ ಹಾಕಿರುವ ಜಾಗದಲ್ಲಿ ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು, ತುಮಕೂರು ಕ್ಷೇತ್ರಗಳಲ್ಲಿ ಮೂರು ಪಕ್ಷಗಳು ಸ್ಪರ್ಧೆ ಮಾಡಿವೆ. ಅಲ್ಲಿ ತ್ರಿಕೋನ ಸ್ಪರ್ಧೆ ಇದೆ. ಬಿಜೆಪಿ ಅಲ್ಲೆಲ್ಲಾ ನಮ್ಮ ಪಕ್ಷದ ವಿರುದ್ಧವೂ ಹೋರಾಟ ಮಾಡುತ್ತಿದೆ. ಹೀಗಾಗಿ ಹೊಂದಾಣಿಕೆ ಪ್ರಶ್ನೆ ಎಲ್ಲಿ ಬಂತು.


ಎಲ್ಲರಿಗೆ ಕುತೂಹಲ ಇರುವುದು ಜೆಡಿಎಸ್ ಉಳಿದ 19 ಕ್ಷೇತ್ರಗಳಲ್ಲಿ ಎನೂ ಮಾಡುತ್ತದೆ ಎಂದು. ಆದರೆ, ನಾನು ಸ್ಥಳೀಯ ಮುಖಂಡರ ಜತೆ ಚರ್ಚೆ ಮಾಡಿದ್ದೆನೆ. ಅವರಿಗೆ ಸ್ಪಷ್ಟ ಆದೇಶ ಕೊಟ್ಟಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ123 ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಏನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ನಿಲುವು ತೆಗೆದುಕೊಳ್ಳುವಂತೆ ಹೇಳಿದ್ದೇನೆ.


ಸ್ಥಳೀಯವಾಗಿ ಕೆಲ ಕ್ಷೇತ್ರದಲ್ಲಿ ನಮ್ಮ ಮತದಾರರು ಕಾಂಗ್ರೆಸ್ ಗೆ ಬೆಂಬಲ ನೀಡುತ್ತಾರೆ. ಕೆಲ ಕ್ಷೇತ್ರದಲ್ಲಿ ಬಿಜೆಪಿ ಗೆ ಬೆಂಬಲ ನೀಡುತ್ತಿದ್ದಾರೆ. ರಾಜ್ಯಮಟ್ಟದ ಪರಿಸ್ಥಿತಿಯೇ ಬೇರೆ. ಸ್ಥಳೀಯ ಮಟ್ಟದ ಸ್ಥಿತಿಯೇ ಬೇರೆ. ಸಿಂಧನೂರು ಜೆಡಿಎಸ್ ಶಾಸಕರು ನನ್ನ ಒಪ್ಪಿಗೆ ಪಡೆದೇ ಕಾಂಗ್ರೆಸ್ ಗೆ ಬೆಂಬಲ ಕೊಡುತ್ತಿದ್ದಾರೆ. ಬಿಜೆಪಿ ಜೊತೆ ಹೊಂದಣಿಕೆ ಮಾಡಿಕೊಂಡಿದ್ದಾರೆ. ಇಲ್ಲಿ ಯಾವ ಒಳ ಒಪ್ಪಂದ ಇಲ್ಲ ಹೊರ ಒಪ್ಪಂದ ಇಲ್ಲ. ಪರಿಷತ್ ಚುನಾವಣೆ ಹೇಗೆ ನೆಡೆಯುತ್ತದೆ ಅಂತ ಗೊತ್ತಿದೆ. ಆರು ಕ್ಷೇತ್ರದಲ್ಲಿ ಮೂರು ಪಕ್ಷದಲ್ಲಿ ಬಾರಿ ಪೈಪೋಟಿ ಇದೆ. ಇಲ್ಲಿ ಅಸ್ತ್ರ ಯಾವುದೂ ಇರುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಪಕ್ಷದ ಮುಖಂಡ ಸರವಣ ಇದ್ದರು.

Join Whatsapp