ಜನರ ವಿಶ್ವಾಸ ಗಳಿಸದೆ ಲಕ್ಷದ್ವೀಪದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ: ನಿಯೋಗಕ್ಕೆ ಕೇಂದ್ರದ ಭರವಸೆ

Prasthutha|

ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ವಿವಾದಾತ್ಮಕ ನಿರ್ಧಾರಗಳಿಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಎಚ್ಚೆತ್ತುಕೊಂಡಿದ್ದು, ಜನರ ವಿಶ್ವಾಸಗಳಿಸಿದ ಬಳಿಕವೇ ಮುಂದಿನ ಹೆಜ್ಜೆ ಇಡುವಂತೆ ಪಟೇಲ್ ಅವರಿಗೆ ಸಲಹೆ ನೀಡಿದೆ. ದ್ವೀಪಗಳಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಸೋಮವಾರ ಗೃಹ ಸಚಿವ ಅಮಿತ್ ಶಾ ಲಕ್ಷದ್ವೀಪದ ಬಿಜೆಪಿ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಉಪಾಧ್ಯಕ್ಷ ಎ ಪಿ ಅಬ್ದುಲ್ಲಕುಟ್ಟಿ ತಿಳಿಸಿದ್ದಾರೆ.

- Advertisement -

‘ಸೇವ್ ಲಕ್ಷದ್ವೀಪ’ ಅಭಿಯಾನ ತೀವ್ರಗೊಳ್ಳುತ್ತಿರುವುದರಿಂದ ಮತ್ತು ಬಿಜೆಪಿಯೊಳಗಿನ ನಾಯಕರು ಕೂಡ ದ್ವೀಪಸಮೂಹದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ಇತ್ತೀಚಿನ ನಿರ್ಧಾರಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದ ಕೇಂದ್ರ ಗೃಹ ಸಚಿವಾಲಯ ಈ ನಿರ್ಧಾರಕ್ಕೆ ಬಂದಿದೆ.

“ಪ್ರಸ್ತಾವಿತ ಬದಲಾವಣೆಗಳು ಕೇವಲ ಸಲಹೆಗಳಾಗಿವೆ ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ. ಲಕ್ಷದ್ವೀಪದ ನಾಗರಿಕರಿಂದ ಅಭಿಪ್ರಾಯವನ್ನು ಸ್ವೀಕರಿಸಲಾಗುವುದು. ಜನರು ಆತಂಕ ಪಡುವ ಅಗತ್ಯವಿಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಅವರ ಒಪ್ಪಿಗೆಗಾಗಿ ಜನರೊಂದಿಗೆ ಚರ್ಚೆ ನಡೆಯಲಿದೆ ಎಂದು ಅವರು ಭರವಸೆ ನೀಡಿದರು ಎಂದು ಬಿಜೆಪಿ ಉಪಾಧ್ಯಕ್ಷ ಹಾಗೂ ಲಕ್ಷದ್ವೀಪದಲ್ಲಿ ಬಿಜೆಪಿ ಉಸ್ತುವಾರಿ ಎ ಪಿ ಅಬ್ದುಲ್ಲಕುಟ್ಟಿ ಅವರು ಅಮಿತ್ ಶಾ ಅವರೊಂದಿಗೆ ನಡೆದ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

- Advertisement -

ಲಕ್ಷದ್ವೀಪದಲ್ಲಿ ಬಿಜೆಪಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸೇರಿದಂತೆ ಬಿಜೆಪಿ ನಾಯಕರು ಈ ನಿಯೋಗದಲ್ಲಿದ್ದರು.ಸೋಮವಾರ ಅಮಿತ್ ಶಾ ಅವರನ್ನು ಭೇಟಿಯಾದ ಲಕ್ಷದ್ವೀಪ ಎನ್ಸಿಪಿ ಸಂಸದ ಮುಹಮ್ಮದ್ ಫೈಸಲ್, ಜನ ಪ್ರತಿನಿಧಿಗಳು, ಪಂಚಾಯಿತಿಗಳು ಅಥವಾ ಅಲ್ಲಿನ ನಿವಾಸಿಗಳ ಒಪ್ಪಿಗೆಯಿಲ್ಲದೆ ಕೇಂದ್ರವು ದ್ವೀಪಗಳಲ್ಲಿ ಯಾವುದೇ ಹೆಜ್ಜೆ ಇಡುವುದಿಲ್ಲ ಎಂದು ಭರವಸೆ ನೀಡಲಾಗಿದೆ ಎಂದು ಹೇಳಿದರು. ಪಟೇಲ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವ ಬೇಡಿಕೆಯ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಾ ಹೇಳಿದ್ದಾರೆ ಎಂದು ಫೈಸಲ್ ತಿಳಿಸಿದ್ದಾರೆ.

Join Whatsapp