ಹೊಸದಿಲ್ಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಂದು ದೇಶದ ಮೊದಲ ಹೈಡ್ರೋಜನ್ ಇಂಧನ ಆಧಾರಿತ ಕಾರಿನಲ್ಲಿ ಬುಧವಾರ ಸಂಸತ್ತಿಗೆ ಆಗಮಿಸಿದ್ದಾರೆ. ‘ಗ್ರೀನ್ ಹೈಡ್ರೋಜನ್’ ಚಾಲಿತ ಕಾರನ್ನು ಸಚಿವ ಗಡ್ಕರಿ ಪ್ರದರ್ಶಿಸಿದ್ದಾರೆ.
ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಗಡ್ಕರಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ನಿರಂತರವಾಗಿ ಏರುತ್ತಿವೆ.ಈಗಾಗಲೇ ನಾವು 8 ಲಕ್ಷ ಕೋಟಿ ರೂ. ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತೇವೆ. ನಾವು ಸ್ವಾವಲಂಬಿ ರಾಷ್ಟ್ರವಾಗಬೇಕಾದರೆ ಭಾರತದಲ್ಲಿ ಹೈಡ್ರೋಜನ್ ಆಧಾರಿತ ಇಂಧನವನ್ನು ಉತ್ಪಾದಿಸಬೇಕು” ಎಂದು ಹೇಳಿದ್ದಾರೆ.
ಗ್ರೀನ್ ಹೈಡ್ರೋಜನ್ ಅನ್ನು ಭಾರತದಲ್ಲಿ ತಯಾರಿಸಲಾಗುವುದು ಎಂದು ಭರವಸೆ ನೀಡಿದ ಅವರು, “ಹಸಿರು ಹೈಡ್ರೋಜನ್ ಇಂಧನ ಮರುಪೂರಣ ಕೇಂದ್ರಗಳನ್ನು ಸ್ಥಾಪಿಸುತ್ತೇವೆ, ಇದು ದೇಶದಲ್ಲಿ ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಭಾರತವು ಶೀಘ್ರದಲ್ಲೇ ಹಸಿರು ಹೈಡ್ರೋಜನ್ ರಫ್ತು ಮಾಡುವ ದೇಶವಾಗಲಿದೆ” ಎಂದು ಗಡ್ಕರಿ ತಿಳಿಸಿದ್ದಾರೆ.