Home ಜಾಲತಾಣದಿಂದ ನಿರ್ಮಲಾನಂದನಾಥ ಸ್ವಾಮೀಜಿ ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ, ಬೇರೆ ಜಾತಿಯವರಿಗಲ್ಲ ಎಂದ ಅಡ್ಡಂಡ ಕಾರ್ಯಪ್ಪ

ನಿರ್ಮಲಾನಂದನಾಥ ಸ್ವಾಮೀಜಿ ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ, ಬೇರೆ ಜಾತಿಯವರಿಗಲ್ಲ ಎಂದ ಅಡ್ಡಂಡ ಕಾರ್ಯಪ್ಪ

►ಸ್ವಾಮೀಜಿ ವಿರುದ್ಧ ನಾಲಗೆ ಹರಿಯಬಿಟ್ಟ ರಂಗಾಯಣ ನಿರ್ದೇಶಕರ ವಿರುದ್ಧ ವ್ಯಾಪಕ ಆಕ್ರೋಶ

ಮೈಸೂರು: ನಿರ್ಮಲಾನಂದನಾಥರು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸ್ವಾಮೀಜಿ, ಬೇರೆ ಜಾತಿಗಳಿಗೆ ಅಲ್ಲ, ಹಾಗಾಗಿ ಉರಿಗೌಡ, ನಂಜೇಗೌಡರ ಕುರಿತು ಚರ್ಚೆ ನಡೆಯಬಾರದು ಎಂದು ಹೇಳಿದ್ದು ಸರಿಯಲ್ಲ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿಕೆ ನೀಡಿದ್ದಾರೆ. ಸ್ವಾಮೀಜಿಗೆ ವಿರುದ್ಧವಾಗಿ ಹೇಳಿಕೆ ನೀಡಿರುವ ಅಡ್ಡಂಡ ಕಾರ್ಯಪ್ಪ ವಿರುದ್ಧ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾಗಿದೆ.

ನಿರ್ಮಲಾನಂದನಾಥ ಸ್ವಾಮೀಜಿ ದೇಶದಲ್ಲೇ ಅತ್ಯಂತ ಗೌರವಾರ್ಹ ಸ್ವಾಮೀಜಿ. ಇಂತಹವರ ವಿರುದ್ಧ ಹೇಳಿಕೆ ನೀಡಿರುವುದು ದಾಷ್ಟ್ಯತನದ ಪರಮಾವಧಿ ಎಂದು ಹಲವು ಮುಖಂಡರು ಹರಿಹಾಯ್ದಿದ್ದಾರೆ.

 ಉರಿ ಗೌಡ, ನಂಜೇಗೌಡ ವಿವಾದದ ಬಗ್ಗೆ ಯಾವುದೇ ಚರ್ಚೆ ಮಾಡಬಾರದು ಎಂಬ ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದೀಗ ಇದರ ವಿರುದ್ಧ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ʻʻಸ್ವಾಮೀಜಿಗಳ ಬಗ್ಗೆ ನನಗೆ ಗೌರವ ಇದೆ. ಆದರೆ ಉರಿಗೌಡ, ನಂಜೇಗೌಡ ಚರ್ಚೆ ನಡೆಯದಂತೆ ಮಾಡಿದ್ದು ಸರಿಯಲ್ಲ. ಈ ಬಗ್ಗೆ ಸಂಶೋಧನೆ ನಡೆಯಲಿ ಅನ್ನಬೇಕಿತ್ತುʼʼ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.

ʻಸ್ವಾಮೀಜಿಗಳು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತರು. ಆಗಾಗ ಡಿ.ಕೆ.ಶಿವಕುಮಾರ್ ಅವರನ್ನು ಕರೆದು ಕುಮಾರಸ್ವಾಮಿ ನಮ್ಮವ, ಅವರ ಸರ್ಕಾರ ಬೀಳದಂತೆ ನೋಡಿಕೋ ಎಂದು ಹೇಳಿದ್ದರುʼʼ ಎಂದು ಗಂಭೀರ ಆರೋಪ ಮಾಡಿರುವ ಅಡ್ಡಂಡ ಕಾರ್ಯಪ್ಪ, ಸ್ವಾಮೀಜಿಗೆ ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಮಾತ್ರ ಒಕ್ಕಲಿಗ ನಾಯಕರು. ಸಿ.ಟಿ.ರವಿ, ಅಶ್ವತ್ಥ ನಾರಾಯಣ ಅವರೆಲ್ಲ ಅದೇ ಸಮುದಾಯದವರಾದರೂ ಸ್ವಾಮೀಜಿಗೆ ಬೇಕಿಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿವಾದದ ಬಗ್ಗೆ ಚರ್ಚೆ ಮಾಡಬಾರದು ಹೇಳಿದ ಬಳಿಕವೂ ಸಿ.ಟಿ. ರವಿ ಮೊದಲಾದ ನಾಯಕರು ಮಾತನಾಡುತ್ತಲೇ ಇದ್ದಾರೆ. ಅದರ ಮುಂದುವರಿದ ಭಾಗವಾಗಿ ಈಗ ಅಡ್ಡಂಡ ಕಾರ್ಯಪ್ಪ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಉರಿಗೌಡ, ನಂಜೇಗೌಡ ಕಾಲ್ಪನಿಕ ಪಾತ್ರಗಳು ಅವರು ಇದ್ದರು ಎನ್ನುವುದಕ್ಕೆ ಆಧಾರವಿಲ್ಲ. ಹಾಗಾಗಿ ಈ ವಿವಾದದ ಬಗ್ಗೆ ಯಾವುದೇ ಚರ್ಚೆ ಮಾಡಬಾರದು ಎಂದು ಆದಿಚುಂಚನಗಿರಿ ಸಂಸ್ಥಾನ ಮಠದ ಸ್ವಾಮೀಜಿ ನಿರ್ಮಲಾನಂದನಾಥ ಅವರು ಹೇಳಿದ್ದರು.  

Join Whatsapp
Exit mobile version