ನವದೆಹಲಿ: ದೆಹಲಿಯ ಶ್ರದ್ಧಾ ವಾಕರ್ ಕೊಲೆ ಪ್ರಕರಣವನ್ನೇ ಹೋಲುವ ನಿಕ್ಕಿ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಸಂಚಿನಲ್ಲಿ ಸಹಕರಿಸಿದ ಆರೋಪದಡಿ ಆರೋಪಿ ಸಾಹಿಲ್ ಗೆಹಲೋತ್ ಅವರ ತಂದೆ ಸೇರಿ ಐದು ಜನರನ್ನು ಬಂಧಿಸಲಾಗಿದೆ.
ಮಗ ನಿಕ್ಕಿಯನ್ನು ಕೊಂದಿದ್ದರ ಬಗ್ಗೆ ತಂದೆ ವೀರೇಂದ್ರ ಸಿಂಗ್ ಗೆ ಮಾಹಿತಿ ತಿಳಿದಿತ್ತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 120ಬಿ(ಕ್ರಿಮಿನಲ್ ಸಂಚು) ಅಡಿ ಪ್ರಕರಣ ದಾಖಲಿಸಲಾಗಿದೆ. ಉಳಿದಂತೆ ಬಂಧಿತ ನಾಲ್ವರು ಸಾಹಿಲ್ ನ ಸಹೋದರರು, ಸೋದರ ಸಂಬಂಧಿಗಳು ಮತ್ತು ಸ್ನೇಹಿತರಾಗಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
ಫೆ.13ರಂದು ದೆಹಲಿಯ ಹರಿದಾಸ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕೊಂದು ಢಾಬಾದ ಫ್ರಿಡ್ಜ್ ನಲ್ಲಿಟ್ಟಿದ್ದ. ದೆಹಲಿ ಅಪರಾಧ ವಿಭಾಗದ ಪೊಲೀಸರ ತಂಡವು ಪಶ್ಚಿಮ ಹರಿದಾಸ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಢಾಬಾದಿಂದ ಯುವತಿಯ ಶವವನ್ನು ವಶಪಡಿಸಿಕೊಂಡಿತ್ತು. ಪ್ರಕರಣ ಸಂಬಂಧ ಮಿತ್ರಾನ್ ಗ್ರಾಮದ ನಿವಾಸಿ ಸಾಹಿಲ್ ಗೆಹ್ಲೋಟ್ ನನ್ನು ಬಂಧಿಸಿತ್ತು.
ತನ್ನ ಮತ್ತು ನಿಕ್ಕಿ ನಡುವಿನ ಚಾಟಿಂಗ್ ಮಾಹಿತಿ ಪೊಲೀಸರಿಗೆ ದೊಡ್ಡ ಸಾಕ್ಷ್ಯವಾಗಲಿದೆ ಎಂಬುದನ್ನು ಆರಿತಿದ್ದ ಆರೋಪಿ ಸಾಹಿಲ್, ನಿಕ್ಕಿ ಮೊಬೈಲ್ನಿಂದ ಎಲ್ಲ ಡೇಟಾವನ್ನು ಅಳಿಸಿರುವುದು ತನಿಖೆ ವೇಳೆ ದೃಢಪಟ್ಟಿತ್ತು.