Home ಕ್ರೀಡೆ ವಿಶ್ವ ಬಾಕ್ಸಿಂಗ್ | ಚೊಚ್ಚಲ ಫೈನಲ್ ಪ್ರವೇಶಿಸಿದ ಭಾರತದ ಝರೀನ್

ವಿಶ್ವ ಬಾಕ್ಸಿಂಗ್ | ಚೊಚ್ಚಲ ಫೈನಲ್ ಪ್ರವೇಶಿಸಿದ ಭಾರತದ ಝರೀನ್

ಟರ್ಕಿಯ ಇಸ್ತಾಬುಲ್‌ನಲ್ಲಿ ನಡೆಯುತ್ತಿರುವ 12ನೇ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಕ್ಸರ್ ನಿಖಾತ್ ಝರೀನ್ ಫೈನಲ್ ಪ್ರವೇಶಿಸಿದ್ದಾರೆ.

ಆ ಮೂಲಕ ಭಾರತಕ್ಕೆ ಚಿನ್ನದ ಪದಕದ ಭರವಸೆ ಮೂಡಿಸಿದ್ದಾರೆ. ಪ್ರತಿಷ್ಠಿತ ಕೂಟದಲ್ಲಿ ಫೈನಲ್ ಪ್ರವೇಶಿಸಿದ ಮೊತ್ತಮೊದಲ ಭಾರತೀಯ ಬಾಕ್ಸರ್ ಎಂಬ ದಾಖಲೆಯನ್ನು ನಿಖಾತ್ ಝರೀನ್ ತಮ್ಮದಾಗಿಸಿಕೊಂಡಿದ್ದಾರೆ. ‌

ಏಕಪಕ್ಷೀಯವಾಗಿ ಮುಗಿದ 52 ಕೆಜಿ ಬೌಟ್‌ನ ಸೆಮಿ ಫೈನಲ್ ಪಂದ್ಯದಲ್ಲಿ, ಬ್ರೆಜಿಲ್‌ನ ಕ್ಯಾರೋಲಿನ್ ಡಿ ಅಲ್ಮೇಡಾರನ್ನು 5-0 ಅಂತರದಲ್ಲಿ ಮಣಿಸಿದ ಝರೀನ್, ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕವನ್ನು ಖಾತ್ರಿ ಪಡಿಸಿದ್ದಾರೆ. ಫೈನಲ್‌ನಲ್ಲಿ ಥಾಯ್ಲೆಂಡ್‌ನ ಜುಟಮಾಸ್ ಜಿಟ್ಪಾಂಗ್‌ರನ್ನು ಝರೀನ್‌ ಎದುರಿಸಲಿದ್ದಾರೆ. 

25 ವರ್ಷದ ತೆಲಂಗಾಣ ಮೂಲದ ನಿಖಾತ್ ಝರೀನ್‌, ತನ್ನ ಚುರುಕಾದ ಮತ್ತು ಆಕ್ರಮಣಕಾರಿ ಪಂಚ್‌ಗಳಿಂದ ಕ್ಯಾರೋಲಿನ್ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದರು. ಇದಕ್ಕೂ ಮೊದಲು ಅಂತಿಮ ಎಂಟರ ಘಟ್ಟದ ಪಂದ್ಯದಲ್ಲೂ ಭಾರತದ ಬಾಕ್ಸರ್ 5-0 ಅಂತರದಿಂದ ಇಂಗ್ಲೆಂಡ್‌ನ ಚಾರ್ಲಿ-ಸಿಯಾನ್ ಟೇಲರ್ ಡೇವಿಸನ್‌ರನ್ನು ಹಿಮ್ಮೆಟ್ಟಿಸಿದ್ದರು. ಮತ್ತೊಂದೆಡೆ 2018ರ ಕಾಮನ್ವೆಲ್ತ್ ಗೇಮ್ಸ್ ಟೂರ್ನಿಯ ಬೆಳ್ಳಿ ಪದಕ ವಿಜೇತೆ ಐರ್ಲೆಂಡ್‌ನ ಕಾರ್ಲಿ ಮೆಕ್ನಾಲ್‌ರನ್ನು ಮಣಿಸಿ ಅಲ್ಮೇಡಾ ಸೆಮಿ ಫೈನಲ್ ಪ್ರವೇಶಿಸಿದ್ದರು.

ಕಂಚು ಗೆದ್ದ ಮನೀಶಾ, ಪರ್ವೀನ್‌

ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಕ್ಸರ್‌ಗಳಾದ ಮನೀಷಾ ಮತ್ತು ಪರ್ವೀನ್‌ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಸೆಮಿಫೈನಲ್ ಪ್ರವೇಶಿಸಿ ಭರವಸೆ ಮೂಡಿಸಿದ್ದ ಮನೀಷಾ ಮತ್ತು ಪರ್ವೀನ್‌, ಅಂತಿಮ ನಾಲ್ಕರ ಘಟ್ಟದ ಹೋರಾಟದಲ್ಲಿ ಯಶಸ್ಸು ಕಾಣುವಲ್ಲಿ ವಿಫಲರಾದರು.

73 ದೇಶಗಳ 310 ಬಾಕ್ಸರ್‌ಗಳು ಭಾಗವಹಿಸಿರುವ ಚಾಂಪಿಯನ್‌ಷಿಪ್‌ನ 57 ಕೆಜಿ ವಿಭಾಗದಲ್ಲಿ ಮನೀಷಾ, ಇಟಲಿಯಾ ಟೆಸ್ಟಾ ಇರ್ಮಾಗೆ 0-5 ಅಂತರದಲ್ಲಿ ಶರಣಾದರು. ದಿನದ ಮೂರನೇ ಸೆಮಿಫೈನಲ್‌ನಲ್ಲಿ 63 ಕೆಜಿ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಪರ್ವೀನ್,  ಐರ್ಲೆಂಡ್‌ನ ಆಮಿ ಬ್ರಾಡ್ ಹರ್ಸ್ಟ್‌ ವಿರುದ್ಧ 1-4 ಅಂತರದಲ್ಲಿ ಸೋಲನುಭವಿಸಿದರು. ಆ ಮೂಲಕ ಇಬ್ಬರು ಬಾಕ್ಸಿಂಗ್‌ ತಾರೆಯರು ಭಾರತದ ಪದಕ ಬೇಟೆಗೆ ಕಂಚಿನ ಪದಕದ ಕೊಡುಗೆ ನೀಡಿದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪರ್ವೀನ್, ತಜಕಿಸ್ತಾನದ ಬಾಕ್ಸರ್ ಶೋರಾ ಜುಲ್ಕಯ್ನಾರೊವಾರನ್ನು 5-0 ಅಂತರದಲ್ಲಿ ಸೋಲಿಸಿದ್ದರು.

2019ರಲ್ಲಿ ರಷ್ಯಾದಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಕೊನೆಯ ಆವೃತ್ತಿಯಲ್ಲಿ, ಭಾರತೀಯ ಬಾಕ್ಸರ್‌ಗಳು ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದರು. ಇದುವರೆಗಿನ 11 ಆವೃತ್ತಿಗಳಲ್ಲಿ ಭಾರತ ಒಂಬತ್ತು ಚಿನ್ನ, ಎಂಟು ಬೆಳ್ಳಿ ಮತ್ತು 19 ಕಂಚು ಸೇರಿದಂತೆ 36 ಪದಕಗಳನ್ನು ಗೆದ್ದಿದೆ.

Join Whatsapp
Exit mobile version