ಬೆಂಗಳೂರು, ಜು.18: ನೈಟ್ ಕರ್ಫ್ಯೂ ಅವಧಿಯನ್ನು ಪರಿಷ್ಕರಿಸಿರುವ ರಾಜ್ಯ ಸರ್ಕಾರ, ರಾತ್ರಿ 9 ಗಂಟೆಯ ಬದಲಿಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಇರಲಿದೆ ಎಂದು ತಿಳಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಪದವಿ ಕಾಲೇಜುಗಳ ಭೌತಿಕ ತರಗತಿಗಳನ್ನು ಜುಲೈ 26ರಿಂದ ಆರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಭೆಯ ಬಳಿಕ ತಿಳಿಸಿದರು.
ರಾತ್ರಿ ಕರ್ಫ್ಯೂ ಅವಧಿಯನ್ನು ಪರಿಷ್ಕರಿಸಲಾಗಿದ್ದು, ರಾತ್ರಿ 9 ಗಂಟೆಯ ಬದಲಾಗಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಚಿತ್ರಮಂದಿರಗಳು, ಮತ್ತು ರಂಗಮಂದಿರಗಳಲ್ಲಿ ಶೇಕಡಾ 50ರಷ್ಟು ಆಸನಗಳನ್ನು ಭರ್ತಿಯೊಂದಿಗೆ ಪ್ರದರ್ಶನ ಆರಂಭಿಸಲು ಅನುಮತಿ ನೀಡಲಾಗಿದೆ.