ಕರ್ನಾಟಕದ ಬಳಿಕ ಕೇರಳದಲ್ಲೂ ನೈಟ್ ಕರ್ಫ್ಯೂ ಜಾರಿಗೆ ಸರ್ಕಾರದ ನಿರ್ಧಾರ

Prasthutha|

ಕೇರಳ: ಜಗತ್ತಿನಾದ್ಯಂತ ವ್ಯಾಪಕ ಭೀತಿ ಸೃಷ್ಟಿಸಿರುವ ಓಮಿಕ್ರಾನ್ ರೂಪಾಂತರ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕರ್ನಾಟಕದ ಬಳಿಕ ಇದೀಗ ಕೇರಳ ರಾಜ್ಯವೂ ಕೂಡ  ನೈಟ್ ಕರ್ಫ್ಯೂ ಜಾರಿಗೊಳಿಸುವುದಾಗಿ ಘೋಷಿಸಿದೆ. ಡಿಸೆಂಬರ್ 30 ರಿಂದ ಜನವರಿ 2ರವರೆಗೆ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.

- Advertisement -

ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನೇತೃತ್ವದಲ್ಲಿ  ಸೋಮವಾರ ನಡೆದ ಕೊರೊನಾ ಪರಿಸ್ಥಿತಿಯ ಕುರಿತ ತಜ್ಞರ ಸಮಿತಿಯ ಪರಿಶೀಲನಾ ಸಭೆಯ ಬಳಿಕ ನೈಟ್ ಕರ್ಫ್ಯೂ ಜಾರಿಗೊಳಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಮುಖ್ಯವಾಗಿ ಹೊಸ ವರ್ಷಾಚರಣೆಯ ನೆಪದಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಗುಂಪುಗೂಡುವುದನ್ನು ತಡೆಯಲು ನೈಟ್ ಕರ್ಫ್ಯೂ ಜಾರಿಗೆ ತರಲಾಗುತ್ತಿದೆ.

ನೈಟ್ ಕರ್ಫ್ಯೂ ಅವಧಿಯಲ್ಲಿ 10 ಗಂಟೆಯ ವೇಳೆಗೆ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಮುಗಿಸಬೇಕು ಹಾಗೂ ಆ ಬಳಿಕ ಸಾರ್ವಜನಿಕರು ಅನಗತ್ಯವಾಗಿ ಓಡಾಟ ನಡೆಸಬಾರದು ಎಂದು ಸೂಚನೆ ನೀಡಲಾಗಿದೆ. ನೈಟ್ ಕರ್ಫ್ಯೂ ಅವಧಿಯಲ್ಲಿ ಅಲ್ಲಲ್ಲಿ ಪೊಲೀಸ್ ತಪಾಸಣೆ ಬಿಗಿಗೊಳಿಸಲಾಗುವುದು.

- Advertisement -

ಕರ್ನಾಟಕದಲ್ಲಿ ನಾಳೆಯಿಂದ ಜನವರಿ 7ರವರೆಗೆ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಓಮಿಕ್ರಾನ್ ರೂಪಾಂತರ ಸೋಂಕು ತಡೆಯುವ ನಿಟ್ಟಿನಲ್ಲಿ ಕರ್ನಾಟಕ, ಕೇರಳ ಹೊರತುಪಡಿಸಿ ದೆಹಲಿ, ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶದಲ್ಲೂ  ಈಗಾಗಲೇ ನೈಟ್ ಕರ್ಫ್ಯೂ ಜಾರಿಯಲ್ಲಿದೆ.

ಕರ್ನಾಟಕ ಸರ್ಕಾರದ ನೈಟ್ ಕರ್ಫ್ಯೂ ನಿರ್ಧಾರಕ್ಕೆ ಹೋಟೆಲ್ ಉದ್ಯಮಿಗಳು, ಬಾರ್, ಪಬ್‌ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನೈಟ್‌ ಕರ್ಫ್ಯೂ ಜಾರಿಗೊಳಿಸುವುದರಿಂದ ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬೀಳಲಿದೆ. ಈಗಾಗಲೇ ಕೋವಿಡ್ ಎರಡು ಬಾರಿಯ ಲಾಕ್‌ಡೌನ್ ಹಾಗೂ ನೈಟ್ ಕರ್ಫ್ಯೂ ಸೇರಿದಂತೆ ಮತ್ತಿತರ ನಿರ್ಬಂಧಗಳು ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ನೀಡಿದೆ. ಅದರಲ್ಲೂ ಹೋಟೆಲ್ ಉದ್ಯಮ, ಆಟೋ, ಕ್ಯಾಬ್ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು ನಲುಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನೈಟ್ ಕರ್ಫ್ಯೂ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ.

Join Whatsapp