ಮುಂಬೈ: ನಿನ್ನೆ ಬಂಧನಕ್ಕೊಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಐವರನ್ನು ಮುಂಬೈ ವಿಶೇಷ ನ್ಯಾಯಾಲಯವು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಶುಕ್ರವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಐವರನ್ನು ಮುಂಬೈ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ವಿಶೇಷ ನ್ಯಾಯಾಧೀಶ ಎ.ಎಂ.ಪಾಟೀಲ್ ಅವರ ಪೀಠವು ಪಿಎಫ್ ಐ ಸಂಘಟನೆಯ ಐವರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಭಯೋತ್ಪಾದನಾ ನಿಗ್ರಹ ದಳ ಕೋರಿತ್ತು. ಆದರೆ ನ್ಯಾಯಾಲಯ ಅಷ್ಟು ದಿನಗಳ ವಿಚಾರಣೆ ಅಗತ್ಯವಿಲ್ಲ ಎಂದು ಹೇಳಿ ಐದು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ವಿಚಾರಣೆಯ ವೇಳೆ ಮಾಧ್ಯಮದವರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು.
ಮಜರ್ ಮನ್ಸೂರ್ ಖಾನ್, ಶೇಖ್ ಸಾದಿಕ್ ಇಸಾಕ್, ಮುಹಮ್ಮದ್ ಇಕ್ಬಾಲ್ ಮುಹಮ್ಮದ್ ಇಬ್ರಾಹಿಂ, ಮೊಮಿನ್ ಮೊಯಿದ್ದೀನ್ ಗುಲಾಮ್ ಹಸನ್, ಹಾಗೂ ಆಸಿಫ್ ಅಮಿನುಲ್ ಹುಸೇನ್ ಖಾನ್ ಅಧಿಕಾರಿ ಅವರನ್ನು ಕಸ್ಟಡಿಗೆ ನೀಡಲಾಗಿದೆ.
ದೇಶಾದ್ಯಂತ ಗುರುವಾರ ಏಕಕಾಲಕ್ಕೆ ಪಿಎಫ್ ಐ ಸಂಘಟನೆಯನ್ನು ಗುರಿಯಾಗಿಸಿ , ಪಿಎಫ್ ಐ ಕಚೇರಿ ಹಾಗೂ ನಾಯಕರ ಮನೆಗಳ ಮೇಲೆ ಎನ್ಐಎ ದಾಳಿ ನಡೆಸಿದ್ದು, 100 ಕ್ಕೂ ಮಿಕ್ಕ ನಾಯಕರನ್ನು ವಶಕ್ಕೆ ಪಡೆಯಲಾಗಿತ್ತು.