Home ಟಾಪ್ ಸುದ್ದಿಗಳು ಪೊಲೀಸ್ ದಾಳಿಯ ವೇಳೆ ಮೂವರು ಮಹಿಳೆಯರ ಆತ್ಮಹತ್ಯೆ | ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್

ಪೊಲೀಸ್ ದಾಳಿಯ ವೇಳೆ ಮೂವರು ಮಹಿಳೆಯರ ಆತ್ಮಹತ್ಯೆ | ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್

ಲಖನೌ: ಉತ್ತರ ಪ್ರದೇಶದ ಬಾಗ್ಪತ್ ಬಚೌದ ಗ್ರಾಮದಲ್ಲಿ ಮೇ 25 ರಂದು ಪೊಲೀಸರು ದಾಳಿ ಮಾಡಿದಾಗ ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣು ಮಕ್ಕಳ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಆಧರಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದೆ.

19 ವರ್ಷದ ಹಿರಿಯ ಮಗಳು ಅದೇ ದಿನ ಸಾವನ್ನಪ್ಪಿದ್ದರೆ, ತಾಯಿ ಮತ್ತು 17ರ ಹರೆಯದ ಕಿರಿಯ ಮಗಳು ಮೇ 26 ರಂದು ಮೀರತ್’ನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಸಬ್ ಇನ್ಸ್ ಪೆಕ್ಟರ್ ಮತ್ತು ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ತನಿಖೆಯ ಪ್ರಸಕ್ತ ಸ್ಥಿತಿ, ಕುಟುಂಬಕ್ಕೆ ನೀಡಿರುವ ಪರಿಹಾರ ಮುಂತಾದ ವಿಷಯದ ಬಗ್ಗೆ ವಿವರವಾದ ವರದಿಯನ್ನು ನಾಲ್ಕು ವಾರಗಳಲ್ಲಿ ಒದಗಿಸುವಂತೆ ಮಾನವ ಹಕ್ಕುಗಳ ಆಯೋಗವು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ.

ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳನ್ನು ವಿಷ ಸೇವಿಸಲು ಪ್ರೇರಣೆ ನೀಡಿದ ಆರೋಪದಡಿಯಲ್ಲಿ ಪೊಲೀಸರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು.

ಸದ್ಯ ಗ್ರಾಮದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

Join Whatsapp
Exit mobile version