ಕಾನ್ಪುರ: ನ್ಯೂಝಿಲೆಂಡ್ ವಿರುದ್ಧ ಮೊದಲ ಟೆಸ್ಟ್’ನಲ್ಲಿ ಟೀಮ್ ಇಂಡಿಯಾ 234 ರನ್’ಗಳಿಗೆ ದ್ವಿತೀಯ ಇನ್ನಿಂಗ್ಸ್ ಡಿಕ್ಲೇ ರ್ ಮಾಡಿಕೊಂಡಿದ್ದು, ಪ್ರವಾಸಿ ಕಿವೀಸ್ ಗೆಲುವಿಗೆ 284 ರನ್’ಗಳ ಗುರಿ ನೀಡಿದೆ.
ಶನಿವಾರ 1 ವಿಕೆಟ್ ನಷ್ಟದಲ್ಲಿ 14 ರನ್‌ಗಳಿಸಿದ್ದ ಭಾರತ, ಭಾನುವಾರ, ಟಿಮ್ ಸೌಥಿ ಹಾಗೂ ಕೇನ್ ಜೇಮಿಸನ್ ಬಿಗು ಬೌಲಿಂಗ್ ದಾಳಿಯ ಎದುರು ರನ್ ಗಳಿಸಿಲು ಪರದಾಡಿದರು. 51 ರನ್‌ಗಳಿಸುವಷ್ಟರಲ್ಲಿ ಟೀಮ್ ಇಂಡಿಯಾದ ಪ್ರಮುಖ ಐವರು ಬ್ಯಾಟರ್’ಗಳು ಪೆವಿಲಿಯನ್ ಸೇರಿದ್ದರು. ಈ ಸಂದರ್ಭದಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವತ್ತ ಹೊರಟಿದ್ದ ತಂಡಕ್ಕೆ ಶ್ರೇಯಸ್ ಅಯ್ಯರ್ ಹಾಗೂ ಆರ್ ಅಶ್ವಿನ್ ಜೋಡಿ ಆಸರೆಯಾದರು.
ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ಐಯ್ಯರ್ ಎರಡನೇ ಇನ್ನಿಂಗ್ಸ್‌ನಲ್ಲಿ 65 ರನ್‌ಗಳಿಸಿದರು. ಆರ್ ಅಶ್ವಿನ್ 32 ರನ್‌ಗಳಿಸಿ ನಿರ್ಗಮಿಸಿದರು. ಬಳಿಕ ಬಂದವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ, ಆಕರ್ಷಕ ಅರ್ಧ ಶತಕ ದಾಖಲಿಸಿ ಮಿಂಚಿದರು. 7 ವಿಕೆಟ್ ನಷ್ಟದಲ್ಲಿ 234 ರನ್’ಗಳಿಸಿದ್ದ ವೇಳೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಈ ವೇಳೆ
ಸಾಹಾ 61 ರನ್ ಹಾಗೂ ಅಕ್ಷರ್ ಪಟೇಲ್ 28 ರನ್‌ಗಳಿಸಿ ಕ್ರೀಸ್’ನಲ್ಲಿದ್ದರು.
284 ರನ್’ಗಳ ವಿಜಯದ ಗುರಿಯನ್ನ ಬೆನ್ನಟ್ಟಲು ಬ್ಯಾಟಿಂಗ್ ಆರಂಭಿಸಿರುವ ನ್ಯೂಜಿಲೆಂಡ್’ಗೆ ಆರಂಭದಲ್ಲೇ ಆರ್.ಆಶ್ವಿನ್ ಆಘಾತ ನೀಡಿದ್ರು. ಮೊದಲ ಇನ್ನಿಂಗ್ಸ್’ನಲ್ಲಿ 85 ರನ್’ಗಳಿಸಿ ಮಿಂಚಿದ್ದ ವಿಲ್ ಯಂಗ್, ಭಾನುವಾರ 2 ರನ್’ಗಳಿಸುವಷ್ಟರಲ್ಲೇ ಅಶ್ವಿನ್ ಬೌಲಿಂಗ್’ನಲ್ಲಿ LBWಗೆ ಬಲಿಯಾದರು.
4ನೇ ದಿನದಾಟದ ಅಂತ್ಯಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್, 4 ಓವರ್‌ಗಳಲ್ಲಿ 4 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದೆ. ಗೆಲುವಿನ ಗುರಿ ಇನ್ನೂ 280 ರನ್’ಗಳ ದೂರವಿದೆ. ಹೀಗಾಗಿ ಅಂತಿಮ ದಿನದಾಟ ಕುತೂಹಲ ಮೂಡಿಸಿದೆ.