ವರ್ಜೀನಿಯಾ; ವಾರ್ತಾ ವಾಹಿನಿಯೊಂದರ ನಿರೂಪಕನ ಜೊತೆ ನೇರ ಪ್ರಸಾರದಲ್ಲಿ ವರದಿ ಮಾಡುತ್ತಿದ್ದ ವೇಳೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು, ನೆಲಕ್ಕೆ ಬಿದ್ದರೂ, ಕ್ಷಣ ಮಾತ್ರದಲ್ಲಿ ಎದ್ದು ನಿಂತು ವರದಿಗಾರಿಕೆಯನ್ನು ಮುಂದುವರಿಸಿದ ಯುವತಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಶ್ಚಿಮ ವರ್ಜಿನಿಯಾದ ದುನ್ಬರ್ ನಗರದ ನೀರಿನ ಸಮಸ್ಯೆ ಕುರಿತ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸ್ಟುಡಿಯೋದಲ್ಲಿದ್ದ ನಿರೂಪಕ ಟಿಮ್ ಇರ್ರ್’ಗೆ,
ವರದಿಗಾರ್ತಿ ಟೊರಿ ಯೊರ್ಗೇವ್ ವಿವರಿಸುತ್ತಿದ್ದರು. ಈ ವೇಳೆ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರು ಟೊರಿ ಯೊರ್ಗೇವ್’ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟೊರಿ ನೆಲಕ್ಕೆ ಬಿದ್ದರೂ, ಕೂಡಲೇ ಎದ್ದು ನಿಂತು ‘ ಓ ಮೈ ಗಾಡ್, ಕಾರೊಂದು ನನಗೆ ಡಿಕ್ಕಿ ಹೊಡೆಯಿತು, ಆದರೆ ಏನೂ ಸಮಸ್ಯೆಯಾಗಿಲ್ಲ, ನಾನು ಆರಾಮವಾಗಿದ್ದೇನೆ ಟಿಮ್’ ಎಂದಿದ್ದಾರೆ. ಜೊತೆಗೆ ಕಾರು ಚಲಾಯಿಸುತ್ತಿದ್ದ ಮಹಿಳೆ ‘ನಿಮಗೆ ಏಟಾಯಿತಾ? ಎಂದು ಪ್ರಶ್ನಿಸಿದ್ದು, ನನಗೇನೂ ಆಗಿಲ್ಲ ಎಂದು ವರದಿಗಾರ್ತಿ ಹೇಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಫ್ಲೋರಿಡಾದ ಪತ್ರಕರ್ತ ಟಿಮೋಥಿ ಬರ್ಕಾ ಈ ವೀಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.