ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಪ್ರಯಾಣಿಕರಿಗೆ ಎರಡು ವಾರಗಳ ಕಾಲ ನ್ಯೂಜಿಲೆಂಡ್ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ದಕ್ಷಿಣ ಏಷ್ಯಾ ದೇಶಗಳಿಂದ ಬರುವ ಪ್ರಯಾಣಿಕರಲ್ಲಿ ಕೊರೊನಾ ಸೋಂಕು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಈ ದೇಶಗಳಲ್ಲಿರುವ ನ್ಯೂಜಿಲೆಂಡ್ ಪ್ರಜೆಗಳಿಗೂ ಅನ್ವಯವಾಗುತ್ತದೆ ಎಂದು ನ್ಯೂಜಿಲೆಂಡ್ ಸರ್ಕಾರ ತಿಳಿಸಿದೆ.
ನ್ಯೂಜಿಲೆಂಡ್ ನಲ್ಲಿ ಗುರುವಾರ 23 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇವರಲ್ಲಿ 17 ಮಂದಿ ಭಾರತದಿಂದ ಬಂದವರಾಗಿದ್ದಾರೆ.
“ಭಾರತದಿಂದ ಬರುವ ಪ್ರಯಾಣಿಕರಿಗೆ ನಾವು ನ್ಯೂಜಿಲೆಂಡ್‌ಗೆ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ ”ಎಂದು ಪ್ರಧಾನಿ ಜಸಿಂದಾ ಅರ್ಡೆರ್ನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 11ರಿಂದ 28ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಜಸಿಂದಾ ತಿಳಿಸಿದ್ದಾರೆ.