Home ಟಾಪ್ ಸುದ್ದಿಗಳು ಹಿಂದುತ್ವವಾದಿಗಳಿಂದ ಪ್ರೊಫೆಸರ್ ಗೆ ಬೆದರಿಕೆ: ನ್ಯೂಜಿಲ್ಯಾಂಡ್ ಪೊಲೀಸರಿಗೆ ತಲೆನೋವು

ಹಿಂದುತ್ವವಾದಿಗಳಿಂದ ಪ್ರೊಫೆಸರ್ ಗೆ ಬೆದರಿಕೆ: ನ್ಯೂಜಿಲ್ಯಾಂಡ್ ಪೊಲೀಸರಿಗೆ ತಲೆನೋವು

ವೆಲ್ಲಿಂಗ್ಟನ್: ಹಿಂದುತ್ವವನ್ನು ಟೀಕಿಸಿದ್ದಕ್ಕಾಗಿ ನ್ಯೂಜಿಲ್ಯಾಂಡಿನಲ್ಲಿರುವ ಭಾರತ ಮೂಲದ ಪ್ರೊಫೆಸರ್ ಒಬ್ಬರಿಗೆ ಹಿಂದುತ್ವವಾದಿಗಳು ಬೆದರಿಕೆ ಮತ್ತು ಅಶ್ಲೀಲ ಬೈಗುಳದ ಮೆಸೇಜ್ ಗಳು ಕಳುಹಿಸುತ್ತಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಪ್ರೊಫೆಸರರನ್ನು ಸುರಕ್ಷತಾ ಜಾಗದಲ್ಲಿ ಇರಿಸುವ ಸಮಸ್ಯೆಯನ್ನು ಅಲ್ಲಿನ ಪೊಲೀಸರು ಎದುರಿಸುತ್ತಿದ್ದಾರೆ ಎಂದು ನ್ಯೂಜಿಲ್ಯಾಂಡ್ ಹೆರಾಲ್ಡ್ ವರದಿ ಮಾಡಿದೆ.
ಮಸ್ಸೇ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಮೋಹನ್ ದತ್ತ ಅವರು ಸಂವಹನ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಅವರ ಇಸ್ಲಾಮೋಪೋಬಿಯಾ ಎಲಿಮೆಂಟ್ಸ್ ಎಂಬ ಪ್ರಬಂಧವು ಪ್ರಕಟವಾದ ಮೇಲೆ ಅವರಿಗೆ ಬೆದರಿಕೆ ಬರುತ್ತಿದೆ. ಹಿಂದುತ್ವ ಉಗ್ರವಾದವು ಹಿಂದೂಗಳಿಗೆ ಮಾರಕ ಎಂಬ ದತ್ತರ ಅಭಿಪ್ರಾಯ ಹಿಂದುತ್ವವಾದಿಗಳನ್ನು ಕೆರಳಿಸಿದೆ ಎಂದು ನ್ಯೂಜಿಲ್ಯಾಂಡ್ ಹೆರಾಲ್ಡ್ ವರದಿ ಹೇಳಿದೆ.
ಹಿಂದುತ್ವ ತತ್ವ ಅಪಾಯಕಾರಿಯಾಗಿದೆ ಎಂದು ದತ್ತ ಅಭಿಪ್ರಾಯ ಪಟ್ಟಿದ್ದಾರೆ. ನ್ಯೂಜಿಲ್ಯಾಂಡಿನಲ್ಲೂ ಹಿಂದುತ್ವವಾದಿಗಳು ಬೇರು ಬಿಡುತ್ತಿರುವುದನ್ನು ದತ್ತರು ಸೂಕ್ಷ್ಮವಾಗಿ ವಿವರಿಸಿದ್ದರು.
“ಡಿಸ್ ಮ್ಯಾಂಟಲಿಂಗ್ ಗ್ಲೋಬಲ್ ಹಿಂದುತ್ವ” ಇಲ್ಲವೇ “ಜಾಗತಿಕ ಹಿಂದುತ್ವವನ್ನು ಕಿತ್ತು ಹಾಕುವುದು” ಎಂಬ ವಿಷಯದ ಸಂಬಂಧ ಆಗಸ್ಟ್ ನಲ್ಲಿ ಪ್ರೊಫೆಸರ್ ದತ್ತ ಆನ್ ಲೈನ್ ಭಾಷಣ ಮಾಡಿದ ಮೇಲೆ ಅವರಿಗೆ ಬೆದರಿಕೆ ಕರೆಗಳು, ಮೆಸೇಜುಗಳು ಬರತೊಡಗಿದವು. ಟ್ವಿಟರ್ ಗಳಲ್ಲಿ ಬಯ್ಗುಳ, ಅಶ್ಲೀಲ ಮಾತು ಸರಮಾಲೆಯಾಗಿ ಬರತೊಡಗಿತು.
ಸಂಘಟಿತವಾಗಿ ಅವರ ಮೇಲೆ ಮೆಸೇಜ್ ದಾಳಿ ನಡೆದಿತ್ತು. ಒಂದು ಫೇಸ್ ಬುಕ್ ಮಾಹಿತಿಯಲ್ಲಿ ದತ್ತರನ್ನು ಜೀವಂತ ಸುಡಬೇಕು ಎನ್ನಲಾಗಿತ್ತು. ಈ ಬೆದರಿಕೆಗಳ ನಡುವೆ ನಾನು ನನ್ನ ಮುಂದಿನ ಅಧ್ಯಯನಗಳನ್ನು ಪ್ರಕಟಿಸುವುದು ಹೇಗೆ ಎನ್ನುತ್ತಾರೆ ಪ್ರೊ. ದತ್ತ.
ನೋಡಿ ನೋಡಿ ಸಾಕಾಗಿ ಸೆಪ್ಟೆಂಬರ್ ನಲ್ಲಿ ದತ್ತ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ಬಲಪಂಥೀಯ ಹಿಂದುತ್ವವಾದಿಗಳು ನ್ಯೂಜಿಲ್ಯಾಂಡಿನಲ್ಲಿ ಕಾರ್ಯವೆಸಗುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪೊಲೀಸರು ದತ್ತರಿಗೆ ರಕ್ಷಣಾ ವ್ಯವಸ್ಥೆ ಮಾಡಿದ್ದಾರೆ, ಭದ್ರತಾ ಸ್ಥಳ ಬೇರೆ ಇದೆಯೇ ಎಂದು ಲೆಕ್ಕಾಚಾರದಲ್ಲಿರುವ ಪೊಲೀಸರು ದೇಶದಲ್ಲಿ ಹಿಂಸಾತ್ಮಕ ಹಿಂದುತ್ವವಾದಿಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಅದೇ ವೇಳೆ ನ್ಯೂಜಿಲ್ಯಾಂಡಿನಲ್ಲಿರುವ ಬಹುತೇಕ ಭಾರತೀಯರು ಪ್ರೊ. ದತ್ತ ಅವರ ಬೆಂಬಲಕ್ಕೆ ನಿಂತಿರುವುದು ಪೊಲೀಸರಿಗೆ ಸ್ವಲ್ಪ ಸಮಾಧಾನ ತಂದಿರುವ ಅಂಶವಾಗಿದೆ. ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಮಸ್ಸೇ ವಿಶ್ವವಿದ್ಯಾನಿಲಯದವರು ದ್ವೇಷದ ಮಳೆ ಸುರಿಸುವ ಉಗ್ರ ಹಿಂದುತ್ವವಾದಿಗಳು ನೆಲೆ ಭದ್ರ ಪಡಿಸದಂತೆ ನ್ಯೂಜಿಲ್ಯಾಂಡಿನಿಂದ ಹೊರಗಟ್ಟಬೇಕು ಎಂಬ ಕೂಗು ಎಬ್ಬಿಸಿದ್ದಾರೆ.
ಇಂಥ ನಡೆಯು ಅನಿವಾಸಿ ಭಾರತೀಯರ ಒಗ್ಗಟ್ಟು ಮುರಿಯುವುದರಿಂದ ಉಗ್ರ ಹಿಂದೂಗಳನ್ನು ಬೆಂಬಲಿಸದಂತೆ ಅಲ್ಲಿನ ಗುಂಪೊಂದು ಒತ್ತಾಯಿಸಿದೆ. ಇದರ ನಡುವೆ ನ್ಯೂಜಿಲ್ಯಾಂಡ್ ಹಿಂದೂ ಪರಿಷತ್ತು, ದತ್ತ ಅವರು ಭಾರತೀಯರನ್ನು ತುಂಬ ಹಗುರವಾಗಿ ಕಂಡಿದ್ದಾರೆ ಎಂದು ಟೀಕಿಸಿದೆ.
Join Whatsapp
Exit mobile version