Home ಟಾಪ್ ಸುದ್ದಿಗಳು ನ್ಯೂಝಿಲ್ಯಾಂಡ್ ಮಸೀದಿ ದಾಳಿಕೋರ ಮೂರು ತಿಂಗಳು ಭಾರತದಲ್ಲಿದ್ದ | ತನಿಖಾ ವರದಿ

ನ್ಯೂಝಿಲ್ಯಾಂಡ್ ಮಸೀದಿ ದಾಳಿಕೋರ ಮೂರು ತಿಂಗಳು ಭಾರತದಲ್ಲಿದ್ದ | ತನಿಖಾ ವರದಿ

ಕ್ರೈಸ್ಟ್ ಚರ್ಚ್ : ಕಳೆದ ವರ್ಷ ನ್ಯೂಝಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನ ಎರಡು ಮಸೀದಿಗಳಲ್ಲಿ ನಡೆದ ಗುಂಡಿನ ದಾಳಿಗಳಲ್ಲಿ 51 ಮಂದಿ ಮುಸ್ಲಿಮರ ಹತ್ಯೆಗೆ ಕಾರಣನಾಗಿದ್ದ ಆಸ್ಟ್ರೇಲಿಯಾ ಪ್ರಜೆ ಬ್ರೆಂಟನ್ ಟರ್ರೆಂಟ್, ದಾಳಿಗೂ ಮುನ್ನಾ ಭಾರತದಲ್ಲಿ ಮೂರು ತಿಂಗಳು ಕಳೆದಿದ್ದ ಬಗ್ಗೆ ವರದಿಯೊಂದು ತಿಳಿಸಿದೆ. ಈ ದಾಳಿಗೂ ಮುನ್ನಾ ಜಗತ್ತಿನ ವಿವಿಧ ದೇಶಗಳಿಗೆ ಭೇಟಿ ನೀಡಿದ್ದ ಟರ್ರೆಂಟ್, ಭಾರತದಲ್ಲೂ ಮೂರು ತಿಂಗಳು ನೆಲೆಸಿದ್ದನೆನ್ನಲಾಗಿದೆ.

2019ರಲ್ಲಿ ನಡೆದ ನ್ಯೂಝಿಲ್ಯಾಂಡ್ ಮಸೀದಿ ದಾಳಿಯಲ್ಲಿ ಐವರು ಭಾರತೀಯರೂ ಮೃತಪಟ್ಟಿದ್ದರು. ರಾಯಲ್ ಎನ್ಕ್ವೇರಿಯ 792 ಪುಟಗಳ ವರದಿಯಲ್ಲಿ ದಾಳಿಕೋರ ಟರ್ರಂಟ್ ಚಟುವಟಿಕೆಗಳ ಬಗ್ಗೆ ವಿವರಿಸಲಾಗಿದೆ. ಅರ್ಧದಲ್ಲಿ ಶಾಲೆಯನ್ನು ತೊರೆದು, 2012ರ ವರೆಗೆ ಸ್ಥಳೀಯವಾಗಿ ಕೆಲಸ ಮಾಡಿಕೊಂಡಿದ್ದ. ಬಳಿಕ ತಂದೆಯ ಹಣದಲ್ಲಿ ವಿದೇಶಗಳನ್ನು ಸುತ್ತುತ್ತಿದ್ದ. 2015, ನ.21ರಿಂದ 2016, ಫೆ.18ರ ವರೆಗೆ ಆತ ಭಾರತದಲ್ಲಿದ್ದ. ವಿದೇಶಗಳಲ್ಲಿ ಅತಿ ಹೆಚ್ಚು ಸಮಯ ಕಳೆದಿದ್ದು ಆತ ಭಾರತದಲ್ಲಿ ಎನ್ನಲಾಗಿದೆ.

ಆದರೆ, ಭಾರತದಲ್ಲಿ ಉಳಿದುಕೊಂಡಿದ್ದ ಮೂರು ತಿಂಗಳಲ್ಲಿ ಆತ ಏನೆಲ್ಲಾ ಮಾಡಿದ್ದಾನೆ ಎಂಬುದರ ಬಗ್ಗೆ ವರದಿಯಲ್ಲಿ ಉಲ್ಲೇಖವಿಲ್ಲ. ಭಾರತ ಹೊರತಾಗಿ ಚೀನಾ, ರಷ್ಯಾ, ದಕ್ಷಿಣ ಕೊರಿಯಾ, ಜಪಾನ್ ದೇಶಗಳಿಗೆ ಆತ ಭೇಟಿ ನೀಡಿದ್ದ. ಆದರೆ, ವಿದೇಶ ಭೇಟಿ ವೇಳೆ ಯಾವುದೇ ಉಗ್ರ ಸಂಘಟನೆ ಜೊತೆ ಸಂಪರ್ಕ ಸಾಧಿಸಿರುವ ಕುರಿತು ಯಾವುದೇ ಮಾಹಿತಿಯಿಲ್ಲ ಎಂದು ವರದಿಗಳು ತಿಳಿಸಿವೆ.  

Join Whatsapp
Exit mobile version