ನವದೆಹಲಿ: ಟೆಲಿಕಾಂ ನಿಯಂತ್ರಣ ಪ್ರಾಧಿಕಾರವಾದ ಟ್ರಾಯ್, ಹೆಚ್ಚುತ್ತಿರುವ ಸಿಮ್ ಕಾರ್ಡ್ ಹಗರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ಇತ್ತೀಚೆಗೆ ಕೆಲ ನಿಯಮಗಳನ್ನು ಪರಿಷ್ಕರಿಸಿದೆ. ಈ ಪ್ರಕಾರ ಜುಲೈ 1ರ ಬಳಿಕ ವಂಚಕರು ಸಿಮ್ ಕಾರ್ಡ್ ಬದಲಾಯಿಸುವ ಕೆಲಸವಾಗಲೀ, ಮೊಬೈಲ್ ನಂಬರ್ ಪೋರ್ಟ್ ಮಾಡುವ ಕೆಲಸವಾಗಲೀ ಕಷ್ಟವಾಗಲಿದೆ.
ಈಗಿರುವ ನಿಯಮದ ಪ್ರಕಾರ ಸಿಮ್ ಕಾರ್ಡ್ ಕಳೆದುಹೋದರೆ ಕೂಡಲೇ ಸಿಮ್ ಬ್ಲಾಕ್ ಮಾಡಿಸಿ, ಹೊಸ ಸಿಮ್ ಅನ್ನು ಪಡೆದು ಆಯಕ್ಟಿವೇಟ್ ಮಾಡಿಸಬಹುದು. ಅಥವಾ ಹೊಸ ಸಿಮ್ ಖರೀದಿಸಿದ ಬಳಿಕ ಹಳೆಯ ಸಿಮ್ ಮರಳಿಸಿ ಹೊಸದಕ್ಕೆ ನಂಬರ್ ಆಯಕ್ಟಿವೇಟ್ ಮಾಡಿಸಬಹುದು. ಇಂದಿನಿಂದ ಈ ನಿಯಮದಲ್ಲಿ ಬದಲಾವಣೆ ಆಗಿದೆ. ಹೊಸ ಸಿಮ್ ಪಡೆದು ಅದಕ್ಕೆ ಹಿಂದಿನ ಸಿಮ್ ನಂಬರ್ ಅನ್ನು ಪೋರ್ಟ್ ಮಾಡಲು ಕನಿಷ್ಠ ಏಳು ದಿನವಾದರೂ ಕಾಯಬೇಕಾಗುತ್ತದೆ.
ಹಾಗೆಯೇ, ಸಿಮ್ ಬದಲಾಯಿಸುವಾಗ ಟೆಲಿಕಾಂ ಆಪರೇಟಿಂಗ್ ಕಂಪನಿಗಳು ಯೂನಿಕ್ ಪೋರ್ಟಿಂಗ್ ಕೋಡ್ ಅಥವಾ ಯುಪಿಸಿ ಕೋಡ್ ಅನ್ನು ನೀಡುತ್ತವೆ. ಇದು ಮೊಬೈಲ್ ನಂಬರ್ ಅನ್ನು ಬೇರೆ ಸಿಮ್ಗೆ ವರ್ಗಾಯಿಸುವ ಕಾರ್ಯದ ಮೊದಲ ಹಂತವಾಗಿರುತ್ತದೆ. ಈ ಎಂಟು ಅಂಕಿಗಳ ಕೋಡ್ ಅನ್ನು ಹಾಕಿದ ಬಳಿಕ ಮೊಬೈಲ್ ನಂಬರ್ ಅನ್ನು ಬೇರೆ ಸಿಮ್ಗೆ ಪೋರ್ಟ್ ಮಾಡಬಹುದು. ಇಲ್ಲಿ ಹೊಸ ನಿಯಮದ ಪ್ರಕಾರ ಸಿಮ್ ನಿಷ್ಕ್ರಿಯಗೊಂಡು ಏಳು ದಿನಗಳವರೆಗೆ ಟೆಲಿಕಾಂ ಆಪರೇಟರ್ಗಳು ಯುಪಿಸಿ ಕೋಡ್ ಅನ್ನು ಒದಗಿಸುವಂತಿಲ್ಲ ಎನ್ನುವ ನಿಯಮವನ್ನು ಟ್ರಾಯ್ ಸೇರಿಸಿದೆ.
ದೇಶಾದ್ಯಂತ ಸಿಮ್ ಸ್ವ್ಯಾಪಿಂಗ್ ಹಗರಣಗಳು, ಮೊಬೈಲ್ ನಂಬರ್ ದುರುಪಯೋಗಡಿಸಿಕೊಳ್ಳುವುದು ಇತ್ಯಾದಿ ವಂಚನೆಗಳು ನಡೆಯುತ್ತಿರುವುದು ಹೆಚ್ಚಿದೆ. ಇದನ್ನು ತಡೆಯಲು ಟ್ರಾಯ್ ಈ ನಿಯಮ ರೂಪಿಸಿರಬಹುದು ಎನ್ನಲಾಗಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಅಧಿಕೃತವಾಗಿ ಕಾರಣ ನೀಡಿಲ್ಲ. ದೂರಸಂಪರ್ಕ ಇಲಾಖೆ ಹಾಗೂ ಹಲವು ಸಂಘ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಹೊಸ ನಿಯಮಗಳನ್ನು ತರಲಾಗಿದೆ ಎಂದು ಅದು ಹೇಳಿದೆ.