Home ಟಾಪ್ ಸುದ್ದಿಗಳು ದೆಹಲಿ, ಪಂಜಾಬ್ ನ ಕ್ರಾಂತಿ ದೇಶದೆಲ್ಲೆಡೆ ಹರಡಲಿದೆ: ಅರವಿಂದ ಕೇಜ್ರಿವಾಲ್

ದೆಹಲಿ, ಪಂಜಾಬ್ ನ ಕ್ರಾಂತಿ ದೇಶದೆಲ್ಲೆಡೆ ಹರಡಲಿದೆ: ಅರವಿಂದ ಕೇಜ್ರಿವಾಲ್

►ನವ ಭಾರತದಲ್ಲಿ ಜನರು ಪರಸ್ಪರ ಪ್ರೀತಿ ಮಾಡಬೇಕೇ ಹೊರತು ದ್ವೇಷಿಸಬಾರದು

ನವದೆಹಲಿ: ಪಂಜಾಬ್ ನಲ್ಲಿ ಹೊಸ ಕ್ರಾಂತಿ ಉಂಟಾಗಿದ್ದು, ಈ ಕ್ರಾಂತಿ ದೇಶದ ಉದ್ದಗಲಕ್ಕೂ ಹರಡಲಿದೆ ಎಂದು ಎಎಪಿ ವರಿಷ್ಠ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಪಂಜಾಬ್ ನಲ್ಲಿ ಎಎಪಿ ಜಯಭೇರಿ ಭಾರಿಸಿದ ನಂತರ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ವಿರುದ್ಧ ಪಂಜಾಬ್ ನಲ್ಲಿ ದೊಡ್ಡ ಷಡ್ಯಂತ್ರ ಮಾಡಿದ್ದರು. ಎಎಪಿ ವಿರುದ್ಧ ದೊಡ್ಡ ದೊಡ್ಡ ಶಕ್ತಿಯವರು ಎಲ್ಲರೂ ಒಂದಾಗಿದ್ದರು. ಕೇಜ್ರಿವಾಲ್ ಭಯೋತ್ಪಾದಕ ಎಂದು ಹೇಳಿದರು. ಇಂದಿನ ತೀರ್ಪಿನ ಬಳಿಕ ಕೇಜ್ರಿವಾಲ್ ಭಯೋತ್ಪಾದಕ ಅಲ್ಲ, ಕೇಜ್ರಿವಾಲ್ ನಿಜವಾದ ದೇಶಭಕ್ತ ಎಂದು ದೇಶದ ಜನರು ಉತ್ತರ ಕೊಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.

ಭಗತ್ ಸಿಂಗ್ ಒಮ್ಮೆ ಹೇಳಿದ್ದರು, ನಾವು ಬ್ರಿಟಿಷರನ್ನಷ್ಟೇ ಓಡಿಸಿ ಸ್ವಾತಂತ್ರ್ಯ ಪಡೆದುಕೊಂಡು ನಾವು ವ್ಯವಸ್ಥೆಯನ್ನು ಬದಲಾಯಿಸದಿದ್ದರೆ ಏನೂ ಆಗಲ್ಲ. ಕಳೆದ 75 ವರ್ಷಗಳಿಂದ ಯಾರೂ ವ್ಯವಸ್ಥೆ ಬದಲಿಸಲಿಲ್ಲ, ಎಎಪಿ ವ್ಯವಸ್ಥೆಯನ್ನು ಬದಲಾವಣೆ ಮಾಡಿದೆ. ಎಎಪಿ ಜನರಿಗಾಗಿ ಕೆಲಸ ಮಾಡಿದೆ. ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಕನಸುಗಳನ್ನು ಪೂರ್ತಿಗೊಳಿಸಿದೆ ಎಂದು ಬಣ್ಣಿಸಿದರು.

ನವ ಭಾರತ ಮಾಡಲು ನಾವೆಲ್ಲರೂ ಇಂದು ಸಂಕಲ್ಪ ಮಾಡಬೇಕಿದೆ. ನವ ಭಾರತದಲ್ಲಿ ಜನರು ಪರಸ್ಪರ ಪ್ರೀತಿ ಮಾಡಬೇಕೇ ಹೊರತು ಯಾರೂ ಕೂಡ ದ್ವೇಷ ಮಾಡಬಾರದು. ಹೊಸ ಭಾರತದಲ್ಲಿ ಯಾರೂ ಕೂಡ ಹಸಿವಿನಿಂದ ಮಲಗಬಾರದು, ನಮ್ಮ ತಾಯಂದಿರು, ಸಹೋದರಿಯರು ಸುರಕ್ಷಿತವಾಗಿರಬೇಕು, ಬಡವರು ಮತ್ತು ಶ್ರೀಮಂತರ ಮಕ್ಕಳಿಗೆ ಒಂದೇ ಕಡೆ ಉತ್ತಮ ಶಿಕ್ಷಣ ಸಿಗಬೇಕು, ಭಾರತದ ಮಕ್ಕಳು ಶಿಕ್ಷಣಕ್ಕಾಗಿ ಉಕ್ರೇನ್ ಗೆ ಹೋಗುವಂತಾಗಬಾರದು, ಪೂರ್ತಿ ಜಗತ್ತಿನ ಮಕ್ಕಳು ಶಿಕ್ಷಣಕ್ಕಾಗಿ ಭಾರತಕ್ಕೆ ಬರಬೇಕು, ಅಂತಹ ಭಾರತ ನಿರ್ಮಾಣಕ್ಕೆ ನಾವು ಸಂಕಲ್ಪ ಮಾಡಬೇಕು. ಮೊದಲು ದೆಹಲಿಯಲ್ಲಿ ಕ್ರಾಂತಿ ನಡೆಯಿತು, ಈಗ ಪಂಜಾಬ್ ನಲ್ಲಿ ಕ್ರಾಂತಿ ಆಗಿದೆ, ಈ ಕ್ರಾಂತಿ ಪೂರ್ತಿ ದೇಶದಲ್ಲಿ ಹರಡಲಿದೆ. ದೇಶದ ಮಹಿಳೆಯರು, ಯುವಸಮೂಹ, ಕಾರ್ಮಿಕರು , ರೈತರು, ವ್ಯಾಪಾರಿಗಳು ಎಎಪಿ ಪಕ್ಷ ಸೇರಿಕೊಳ್ಳಿ ಎಂದು ಕೇಜ್ರಿವಾಲ್ ಮನವಿ ಮಾಡಿದರು.

Join Whatsapp
Exit mobile version