ನವದೆಹಲಿ: ರಷ್ಯಾ – ಉಕ್ರೇನ್ ಮಧ್ಯೆ ಸಂಘರ್ಷ ಮುಂದುವರಿದಿದ್ದು, ಖಾರ್ಕಿವ್ ನಲ್ಲಿ ತನ್ನ ಯಾವುದೇ ಪ್ರಜೆಗಳನ್ನು ಉಕ್ರೇನ್ ಸೇನೆ ಒತ್ತೆಯಾಳಾಗಿರಿಸಿಲ್ಲ ಎಂದು ಭಾರತ ಇಂದು ಸ್ಪಷ್ಟಪಡಿಸಿದೆ.
ಉಕ್ರೇನ್ ಸೈನಿಕರು ಭಾರತೀಯ ಪ್ರಜೆಗಳನ್ನು ಒತ್ತೆಯಾಳಾಗಿರಿಸಿದೆ ಎಂಬ ರಷ್ಯಾದ ಆರೋಪದ ಮಧ್ಯೆ ಭಾರತದಿಂದ ಈ ಹೇಳಿಕೆ ಹೊರಬಿದ್ದಿದೆ.
ಉಕ್ರೇನ್’ನ ಖಾರ್ಕಿವ್ ನಿಂದ ಕೆಲವು ಭಾರತೀಯರನ್ನು ಉಕ್ರೇನ್ ಸೇನೆ ಬಲವಂತವಾಗಿ ತಡೆದು ನಿಲ್ಲಿಸಿದೆ ಎಂಬ ರಷ್ಯಾದ ಆರೋಪವನ್ನು ಪ್ರಧಾನಿ ಮೋದಿ ತಳ್ಳಿಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರ ಸಚಿವಾಲಯದ ರಾಜ್ಯ ಖಾತೆ ಸಚಿವ ಅರಿಂದಮ್ ಭಾಗ್ಚಿ, ಕೀವ್’ನಲ್ಲಿರುವ ಭಾರತೀಯರೊಂದಿಗೆ ರಾಯಭಾರಿ ಕಚೇರಿ ನಿರಂತರ ಸಂಪರ್ಕದಲ್ಲಿದೆ. ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಹಲವು ಭಾರತೀಯ ವಿದಾರ್ಥಿಗಳು ಬುಧವಾರ ಉಕ್ರೇನ್ ನಿಂದ ನಿರ್ಗಮಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿರಿಸಿದ ಕುರಿತ ಯಾವುದೇ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಉಕ್ರೇನ್ ಸೈನಿಕರು ಕೆಲವು ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಗಿರಿಸಿದೆ ಎಂಬ ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡಿದ್ದರು.
ಈ ನಡುವೆ ಖಾರ್ಕಿವ್ ಮತ್ತು ನೆರೆಯ ಪ್ರದೇಶಗಳಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ವಿಶೇಷ ರೈಲಿನ ವ್ಯವಸ್ಥೆಗೊಳಿಸುವಂತೆ ವಿದೇಶಾಂಗ ವ್ಯವಹಾರ ಸಚಿವಾಲಯವು ಉಕ್ರೇನ್ ಅನ್ನು ಒತ್ತಾಯಿಸಿದೆ.