Home ಟಾಪ್ ಸುದ್ದಿಗಳು ಪ್ರವಾಹದಿಂದ ಮೂವರು ವಿದ್ಯಾರ್ಥಿಗಳು ಮೃತ್ಯು : ರಾಹುಲ್ ಗಾಂಧಿ ಸಂತಾಪ

ಪ್ರವಾಹದಿಂದ ಮೂವರು ವಿದ್ಯಾರ್ಥಿಗಳು ಮೃತ್ಯು : ರಾಹುಲ್ ಗಾಂಧಿ ಸಂತಾಪ

ನವದೆಹಲಿ: ಇಲ್ಲಿಯ ಓಲ್ಡ್ ರಾಜಿಂದರ್ ನಗರ ಪ್ರದೇಶದ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಲ್ಲಿ ಪ್ರವಾಹದಿಂದಾಗಿ ಸಾವನ್ನಪ್ಪಿದ ಮೂವರು ವಿದ್ಯಾರ್ಥಿಗಳ ಸಾವಿಗೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಸಂತಾಪ ಸೂಚಿಸಿದ್ದಾರೆ. ಘಟನೆಯನ್ನು ‘ವ್ಯವಸ್ಥೆಯ ಸಾಮೂಹಿಕ ವೈಫಲ್ಯ’ ಎಂದು ಅವರು ಬಣ್ಣಿಸಿದ್ದಾರೆ.

ದೆಹಲಿಯ ಕಟ್ಟಡದ ನೆಲಮಾಳಿಗೆಯಲ್ಲಿ ನೀರು ನಿಂತಿದ್ದರಿಂದ ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಸಾವು ತುಂಬಾ ದುರದೃಷ್ಟಕರ. ಕೆಲವು ದಿನಗಳ ಹಿಂದೆ, ಮಳೆಯ ಸಮಯದಲ್ಲಿ ವಿದ್ಯುತ್ ಆಘಾತದಿಂದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದನು. ದುಃಖಿತ ಎಲ್ಲಾ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ರಾಹುಲ್ ಗಾಂಧಿ Xನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೂಲಸೌಕರ್ಯಗಳ ಈ ಕುಸಿತವು ವ್ಯವಸ್ಥೆಯ ಸಾಮೂಹಿಕ ವೈಫಲ್ಯವಾಗಿದೆ. ಅಸುರಕ್ಷಿತ ನಿರ್ಮಾಣ, ಕಳಪೆ ನಗರ ಯೋಜನೆ ಮತ್ತು ಪ್ರತಿ ಹಂತದಲ್ಲೂ ಸಂಸ್ಥೆಗಳ ಬೇಜವಾಬ್ದಾರಿತನದ ಬೆಲೆಯನ್ನು ಸಾಮಾನ್ಯ ನಾಗರಿಕರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ಮೂಲಕ ಬೆಲೆ ತೆರುತ್ತಿದ್ದಾರೆ. ಸುರಕ್ಷಿತ ಮತ್ತು ಆರಾಮದಾಯಕ ಜೀವನವು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ರಾಯ್‌ಬರೇಲಿ ಸಂಸದರು ಹೇಳಿದರು.

ಶನಿವಾರ ಸುರಿದ ಭಾರೀ ಮಳೆಗೆ ರಾಜೇಂದ್ರ ನಗರದಲ್ಲಿರುವ ರಾವ್‌ ಐಎಎಸ್‌‍ ಅಕಾಡೆಮಿಯ ನೆಲಮಾಳಿಗೆ ನೀರು ತುಂಬಿಕೊಂಡು 3 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು,ಘಟನೆ ಕುರಿತು ಮ್ಯಾಜಿಸ್ಟ್ರೇಟ್‌ ತನಿಖೆಗೆ ದೆಹಲಿ ಸರ್ಕಾರ ಆದೇಶಿಸಿದೆ.

ನೆಲಮಾಳಿಗೆಯಲ್ಲಿ ವಿದ್ಯಾರ್ಥಿಗಳು ಸಿಲುಕಿರುವ ಬಗ್ಗೆ ಮಾಹಿತಿ ಲಭಿಸಿದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭವಾದ ಕೆಲವೇ ಗಂಟೆಗಳ ಇಬ್ಬರು ವಿದ್ಯಾರ್ಥಿನಿಯರ ಮೃತದೇಹಗಳು ಪತ್ತೆಯಾಗಿತ್ತು. ನಂತರ ತಡ ರಾತ್ರಿ ಮತ್ತೊಬ್ಬ ವಿದ್ಯಾರ್ಥಿಯ ಶವ ಹೊರತೆಗೆಯಲಾಗಿತ್ತು.

Join Whatsapp
Exit mobile version