ಮಂಗಳೂರು: ದ.ಕ ಜಿಲ್ಲಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನೇತ್ರಾವತಿ, ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ.
ನೇತ್ರಾವತಿ ಮತ್ತು ಕುಮಾರದಾರ ನದಿಗಳ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
ಸದ್ಯ 29.09 ಮೀಟರ್ ನಷ್ಟು ನದಿ ನೀರಿನ ಹರಿವು ಇದ್ದು ಅಪಾಯದ ಮಟ್ಟ 31.05 ಆಗಿದೆ. ಪಂಜಳ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿದ್ದು ಹೆದ್ದಾರಿಯ ಒಂದು ಬದಿಯಲ್ಲಿ ಮಾತ್ರ ವಾಹನಗಳು ಸಂಚರಿಸುತ್ತಿದೆ. ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದ್ದು, ಸ್ಥಳೀಯ ಜನರಲ್ಲಿ ಆತಂಕ ಮನೆ ಮಾಡಿದೆ.
ಬಂಟ್ವಾಳ ನಗರ ವ್ಯಾಪ್ತಿಯಲ್ಲಿ ನದಿ ನೀರು ಏರಿಕೆಯಾಗಿದ್ದು, ನದಿ ನೀರು ರಸ್ತೆಗೆ ಬಂದು ತಲುಪಿದೆ. ಪೇಟೆ ವ್ಯಾಪ್ತಿಯ ಮಕ್ಕಳು ಹೆಚ್ಚಾಗಿ ಆಟೋ ಮತ್ತು ವ್ಯಾನ್ ಗಳಲ್ಲಿ ಶಾಲೆಗೆ ತೆರಳುತ್ತಾರೆ. ನದಿಯ ತಟಗಳಲ್ಲಿರುವ ಗ್ರಾಮಾಂತರ ಪ್ರದೇಶದ ಶಾಲೆಗಳಾದ ಬಾಳ್ತಿಲ, ಪೆರ್ನೆ, ಕಡೆಶ್ವಾಲ್ಯ, ಮತ್ತು ಇನ್ನೂ ನೀರಿನ ಅಪಾಯವುಳ್ಳ ಶಾಲೆಗಳ ಸಿಆರ್ ಪಿ, ಮತ್ತು ಎಸ್.ಡಿ.ಎಂಸಿ ಸಮಿತಿಗಳಿಗೆ ತಮ್ಮ ಹಂತದಲ್ಲೇ ರಜೆ ನೀಡುವಂತೆ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ಸೂಚನೆ ನೀಡಿದ್ದಾರೆ.