ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿಯವರು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರೂ ಮಂಗಳೂರು ಪೊಲೀಸರು ಇನ್ನೂ ಕೂಡಾ ಪ್ರಕರಣ ದಾಖಲಿಸದೇ ನಿರ್ಲಕ್ಷ್ಯ ತೋರಿದ್ದಾರೆ.
ಇತ್ತೀಚೆಗೆ ನಗರದ ಕಾವೂರಿನಲ್ಲಿ ಬಿಜೆಪಿಯ ‘ವಿಕಾಸ್ ತೀರ್ಥ’ ಬೈಕ್ ಜಾಥಾ ಸಂದರ್ಭದಲ್ಲಿ ಶಾಸಕ ಭರತ್ ಶೆಟ್ಟಿಯವರು ಸೇರಿದಂತೆ ನೂರಾರು ಕಾರ್ಯಕರ್ತರು ಹೆಲ್ಮೆಟ್ ಧರಿಸದೆ ಜಾಥಾದಲ್ಲಿ ಪಾಲ್ಗೊಂಡಿದ್ದರು. ಇದು ಪೊಲೀಸರ ಕಣ್ಣ ಮುಂದೆಯೇ ನಡೆದಿದ್ದರೂ ಇದುವರೆಗೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ. ಜಾಥಾ ಕಾವೂರು ಬಿಜೆಪಿ ಕಚೇರಿಯಿಂದ ಬಂಟ್ವಾಳದವರೆಗೆ ನಡೆದಿತ್ತು.
ಈ ಕುರಿತು ಜಾಲತಾಣಗಳಲ್ಲಿ ಹಲವರು ಪೊಲೀಸರ ಗಮನಕ್ಕೆ ತಂದರೂ ಇದುವರೆಗೂ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ. ಈ ಕುರಿತು ಜಾಲತಾಣಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಬಡ ಸವಾರರು ಸಣ್ಣ ಪುಟ್ಟ ಚಾಲನಾ ನಿಯಮ ಉಲ್ಲಂಘಿಸಿದರೆ ಫೋಟೋ ಹೊಡೆದು ದಂಡ ವಿಧಿಸುವ ಪೊಲೀಸರು, ಶಾಸಕರ ಈ ನಿಯಮ ಉಲ್ಲಂಘನೆಯ ಕುರಿತು ನಿರ್ಲಕ್ಷ್ಯ ತಾಳಿದ್ದಾರೆ ಎಂದು ದೂರಿದ್ದಾರೆ. ಇನ್ನಾದರೂ ಪೊಲೀಸರು ಶಾಸಕರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.