ರಾಷ್ಟ್ರೀಯ ಶಿಕ್ಷಣ ನೀತಿ ಅಂದರೆ ನಾಗ್ಪುರ ಶಿಕ್ಷಣ ನೀತಿ | NEP ವಿರುದ್ದ ಡಿ.ಕೆ.ಶಿ ಕಿಡಿ

Prasthutha|

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರಕಾರ ತರಾತುರಿಯಲ್ಲಿ ಜಾರಿಗೆ ತರಲು ಮುಂದಾಗಿರುವ NEP ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲ, ಅದು ನಾಗ್ಪುರ ಶಿಕ್ಷಣ ನೀತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಸಂಸತ್ತಿನಲ್ಲಿ ಚರ್ಚೆ ಆಗದೇ ಇರುವ ನೀತಿಯನ್ನು ರಾಜ್ಯದಲ್ಲಿ ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವುದರ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟ ಮಾಡಲಿದೆ. ನೀವು ಏನೇ ತಿಪ್ಪರಲಾಗ ಹಾಕಿದರೂ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಯಾಗದೇ ಇದನ್ನು ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ’ ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಷ್ಟ್ರೀಯ ಶಿಕ್ಷಣ ನೀತಿ ಎಂದರೆ ಅದರ ಬಗ್ಗೆ ರಾಷ್ಟ್ರಾದ್ಯಂತ ವ್ಯಾಪಕ ಚರ್ಚೆ ಆಗಬೇಕು. ಸಂಸತ್ತು, ವಿಧಾನಸಭೆ, ವಿಧಾನ ಪರಿಷತ್ ನಲ್ಲಿ ಚರ್ಚಿಸಬೇಕು. ಆದರೆ ಅದ್ಯಾವುದು ನಡೆದಿಲ್ಲ. ಸದನ ಸಮಿತಿ ರಚಿಸಿ, ರಾಜ್ಯದುದ್ದಗಲಕ್ಕೂ ಜನರ ಜತೆ ಚರ್ಚಿಸಿ, ಅಭಿಪ್ರಾಯ ಪಡೆಯುವವರೆಗೂ ರಾಜ್ಯದಲ್ಲಿ ಇದರ ಜಾರಿಗೆ ನಾವು ಅವಕಾಶ ನೀಡುವುದಿಲ್ಲ ಎಂದರು.


ನಾನು ಕೂಡ ಶಿಕ್ಷಣ ಕ್ಷೇತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದು, ವಿದ್ಯಾಸಂಸ್ಥೆಗಳನ್ನು ನಡೆಸುತ್ತಾ ಬಂದಿದ್ದೇನೆ. ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಟ್ರಸ್ಟಿಯಾಗಿದ್ದೇನೆ. ಈ ನೂತನ ಶಿಕ್ಷಣ ನೀತಿ ಏನು, ಅದರಿಂದ ಆಗುವ ಪ್ರಯೋಜನೆಗಳೇನು? ಎಂಬುದನ್ನು ಅರ್ಥ ಮಾಡಿಕೊಳ್ಳಲು ನನ್ನಿಂದಲೇ ಸಾಧ್ಯವಾಗುತ್ತಿಲ್ಲ ಹೇಳಿದರು.

- Advertisement -


ಇದನ್ನು ಅರ್ಥ ಮಾಡಿಕೊಳ್ಳಲು ಹಲವು ಬಾರಿ ವಿದ್ಯಾರ್ಥಿಗಳು, ಶಿಕ್ಷಕರು, ತಜ್ಞರ ಜತೆ ಚರ್ಚೆ ಮಾಡಿ ಪ್ರಯತ್ನಪಟ್ಟರೂ ಇದರ ಒಳಗುಟ್ಟು ಏನು ಎಂಬುದೇ ಅರ್ಥವಾಗುತ್ತಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಯಾಕಿಷ್ಟು ಆತುರದಲ್ಲಿ ಇದನ್ನು ಜಾರಿ ತರಲು ಮುಂದಾಗಿದೆಯೋ ತಿಳಿಯುತ್ತಿಲ್ಲ. ಶಿಕ್ಷಕರು ಇಲ್ಲ, ವಿದ್ಯಾರ್ಥಿಗಳು ಶಾಲೆ ಸೇರಲು ಸಾಧ್ಯವಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟ ಯಾರ ಜತೆಗೂ ಸರ್ಕಾರ ಈ ನೂತನ ಶಿಕ್ಷಣ ನೀತಿ ಬಗ್ಗೆ ಚರ್ಚೆ ಮಾಡಿಲ್ಲ. ಸಂಸತ್ತಿನಿಂದ ಹಿಡಿದು, ವಿಧಾನ ಮಂಡಲದ ಉಭಯ ಸದನಗಳವರೆಗೂ ಎಲ್ಲೂ ಚರ್ಚೆ ಆಗಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

Join Whatsapp