ಬೆಂಗಳೂರು: ಪಿಯುಸಿ ಹಂತದಲ್ಲಿ 25 ಸಾವಿರ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್ (NEET) ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವರ್ಷದಿಂದಲೇ ಉಚಿವಾಗಿ ನೀಟ್ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ತಜ್ಞರಿಂದ ರಾಜ್ಯದ 25 ಸಾವಿರ ಬಡ ಪಿಯು ವಿದ್ಯಾರ್ಥಿಗಳಿಗೆ ನೀಟ್ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ 12 ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ. ಆನ್ಲೈನ್ ನಲ್ಲೂ ತರಬೇತಿ ನಡೆಯಲಿದೆ. ಇದರಿಂದ ಬಡ ವಿದ್ಯಾರ್ಥಿಗಳು ಖಾಸಗಿ ಕೋಚಿಂಗ್ ಕ್ಲಾಸ್ ಗೆ ಹೋಗಿ, ಲಕ್ಷ ಲಕ್ಷ ಹಣ ಖರ್ಚು ಮಾಡುವುದು ತಪ್ಪುತ್ತದೆ. ಇದು ವೈದ್ಯಯಕೀಯ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಉತ್ತೇಜಿಸಿದಂತಾಗುತ್ತದೆ ಎಂದರು.
25 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಇಲಾಖೆ ಪರೀಕ್ಷೆ ನಡೆಯಲಿದೆ. ಇಲ್ಲಿ ಪಾಸ್ ಆಗುವ 25 ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಅಲ್ಲದೆ, 8,9,10ನೇ ತರಗತಿ ವಿಜ್ಞಾನ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ಮರು ಸಿಂಚನ ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದು ತಿಳಿಸಿದರು.