►ನೀಟ್ ಎಂದರೆ ಕನ್ನಡಿಗರಿಗೆ ಮಾಡಿದ ಮಹಾದ್ರೋಹ, ವಂಚನೆ, ಪಿತೂರಿ
ಬೆಂಗಳೂರು: ಕನ್ನಡಿಗರೇ, ಈಗಲಾದರೂ ಎಚ್ಚೆತ್ತುಕೊಳ್ಳಿ. ಹುಸಿ ರಾಷ್ಟ್ರೀಯತೆಯ ಹೆಸರಿನಲ್ಲಿ, ಒಂದು ದೇಶ ಒಂದು ವ್ಯವಸ್ಥೆಯ ಸೋಗಿನಲ್ಲಿ ಈ ದೇಶದ ಒಕ್ಕೂಟ ವ್ಯವಸ್ಥೆಯನ್ನು ಛಿದ್ರಗೊಳಿಸಲಾಗುತ್ತಿದೆ.
ನೀಟ್ ಕೂಡ ಕನ್ನಡಿಗರ ಹಕ್ಕುಗಳನ್ನು ಕಸಿದುಕೊಳ್ಳುವ ದುಷ್ಟ ವ್ಯವಸ್ಥೆ. ಇದನ್ನು ಧಿಕ್ಕರಿಸಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಡಾ.ಟಿ.ಎ.ನಾರಾಯಣ ಗೌಡ ಹೇಳಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ನೀಟ್ ಜಾರಿಗೆ ಬರುವ ಮುನ್ನ ಕನ್ನಡದ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲೇ ಮೆಡಿಕಲ್ ಸೀಟುಗಳು ದೊರೆಯುತ್ತಿದ್ದವು. ನೀಟ್ ಬಂದ ನಂತರ ಅದು ಪರರಾಜ್ಯದವರ ಪಾಲಾದವು. ನೀಟ್ ಎಂದರೆ ಕನ್ನಡಿಗರಿಗೆ ಮಾಡಿದ ಮಹಾದ್ರೋಹ, ವಂಚನೆ, ಪಿತೂರಿ. ಇದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ. ನೀಟ್ ವಿಷಯದಲ್ಲಿ ತಮಿಳುನಾಡು ಮೊದಲಿನಿಂದಲೂ ಧ್ವನಿ ಎತ್ತುತ್ತ ಬಂದಿದೆ. ನಮ್ಮ ಕರ್ನಾಟಕದ ರಾಜಕಾರಣಿಗಳಿಗೆ ಇದರ ಅರಿವೂ ಇಲ್ಲ.
ಕನ್ನಡಿಗರ ಹಿತಾಸಕ್ತಿ ಕಾಪಾಡಬೇಕಾದ ರಾಜಕೀಯ ಪಕ್ಷಗಳು ಕನ್ನಡಿಗರ ಪಾಲಿಗೆ ಸತ್ತು ಹೋಗಿವೆ. ಇದರ ಪರಿಣಾಮವಾಗಿ ಕನ್ನಡದ ಮಕ್ಕಳು ನಲುಗುವಂತಾಗಿದೆ ಎಂದು ನಾರಾಯಣ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ನೀಟ್ ನಿಂದಾಗಿ ಮೆಡಿಕಲ್ ಸೀಟು ಸಿಗದೆ ಹಲವಾರು ಪ್ರತಿಭಾವಂತ ಕನ್ನಡದ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಮ್ಮ ಕನ್ನಡದ ಮಕ್ಕಳಿಗೆ ಕರ್ನಾಟಕದಲ್ಲಿಯೇ ಅವಕಾಶ ಸಿಗದೆ ಸಾಯುವಂತೆ ಮಾಡುತ್ತಿರುವ ಈ ಕೆಟ್ಟ ವ್ಯವಸ್ಥೆ ನಮಗೆ ಬೇಕೆ? ಇದೆಂಥ ನ್ಯಾಯ? ಇದನ್ನೆಲ್ಲ ನೋಡಿಕೊಂಡು ನಾವು ಸುಮ್ಮನಿರಬೇಕೆ? ಎಂದು ಅವರು ತಿಳಿಸಿದ್ದಾರೆ. 21 ಕೋಟಿ ಜನಸಂಖ್ಯೆಯ ಉತ್ತರಪ್ರದೇಶ ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ ಇರುವಷ್ಟು ಮೆಡಿಕಲ್ ಕಾಲೇಜುಗಳು ಇಲ್ಲ! ನೀಟ್ ಜಾರಿಗೆ ಬಂದಿದ್ದು ಈ ಕಾರಣಕ್ಕೆ. ಕರ್ನಾಟಕದ ಕಾಲೇಜುಗಳಲ್ಲಿ ಉತ್ತರ ಭಾರತೀಯರನ್ನು ತುಂಬುವ ಯೋಜನೆಯೇ ನೀಟ್. ಮತ್ತೇನೂ ಅಲ್ಲ.
ಸ್ವಾತಂತ್ರ್ಯಾನಂತರ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ದೇಶದ ಇತರೆಲ್ಲ ರಾಜ್ಯಗಳಿಗಿಂತ ಹೆಚ್ಚು ಸಾಧಿಸಿರುವುದು ಕರ್ನಾಟಕ ರಾಜ್ಯ. ಒಟ್ಟು 69 ಮೆಡಿಕಲ್ ಕಾಲೇಜುಗಳೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆದರೆ ಕನ್ನಡದ ಮಕ್ಕಳಿಗೇ ಮೆಡಿಕಲ್ ಸೀಟು ಇಲ್ಲ. ನೀಟ್ ಹೆಸರಲ್ಲಿ ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ. ಕನ್ನಡದ ಹುಡುಗ ನವೀನ್ ಶೇಖರಪ್ಪ ಉಕ್ರೇನ್ ನಲ್ಲಿ ರಷ್ಯಾ ಪಡೆಗಳ ದಾಳಿಗೆ ಸಿಲುಕಿ ಕೊಲೆಗೀಡಾಗಿದ್ದಾನೆ. ಈ ಸಾವಿನ ಹೊಣೆ ಹೊರುವವರು ಯಾರು? ಒಂದೆಡೆ ಸೀಟಿಗೆ ಕೋಟಿಗಟ್ಟಲೆ ಹಣ ಬಾಚುವ ಕ್ಯಾಪಿಟೇಷನ್ ಲಾಬಿ, ಇನ್ನೊಂದೆಡೆ ಕನ್ನಡಿಗರ ಹಕ್ಕುಗಳನ್ನು ಕಸಿಯುತ್ತಿರುವ ನೀಟ್ ಎಂಬ ಷಡ್ಯಂತ್ರ. ಬಲಿಯಾಗುತ್ತಿರುವುದು ಕನ್ನಡಿಗರು ಎಂದು ಅವರು ತಿಳಿಸಿದ್ದಾರೆ. 7245 ಮೆಡಿಕಲ್ ಸೀಟುಗಳು ಇರುವ ಕರ್ನಾಟಕದಿಂದ ಅತಿ ಹೆಚ್ಚು ಸೀಟುಗಳನ್ನು ಬೇರೆ ರಾಜ್ಯಗಳಿಗೆ ಹಂಚುವ ವ್ಯವಸ್ಥೆಯೇ ನೀಟ್. ಒಂದು ದೇಶ, ಒಂದು ಪರೀಕ್ಷೆ ಹೆಸರಲ್ಲಿ ಒಕ್ಕೂಟ ಸರ್ಕಾರ ಕನ್ನಡದ ಮಕ್ಕಳ ಹಕ್ಕನ್ನು ಕಸಿದಿದೆ. ಅದರ ಪರಿಣಾಮವಾಗಿಯೇ ಕನ್ನಡದ ಮಕ್ಕಳು ಹೊರದೇಶಗಳಿಗೆ ಹೋಗುವಂತಾಗಿದೆ ಎಂದು ನಾರಾಯಣ ಗೌಡ ಟ್ವೀಟ್ ಮಾಡಿದ್ದಾರೆ.