NEET ನಲ್ಲಿ ಮೊದಲ 5 ಸ್ಥಾನಗಳು ಮುಸ್ಲಿಂ ಅಭ್ಯರ್ಥಿಗಳಿಗೆ ಸಿಕ್ಕಿರುವುದು ನಿಜವೇ?

Prasthutha|

ನವದೆಹಲಿ : ಕಳೆದ ತಿಂಗಳು ಬಿಜೆಪಿ ಬೆಂಬಲಿಗ ಪತ್ರಕರ್ತ ಸುರೇಶ್ ಚಾವಂಕೆ ಸಂಪಾದಕತ್ವದ ‘ಸುದರ್ಶನ್ ನ್ಯೂಸ್’ ಚಾನೆಲ್, ಯುಪಿಎಸ್ ಸಿ ಪರೀಕ್ಷೆಯಲ್ಲಿ ಮುಸ್ಲಿಮರು ಹೆಚ್ಚಿನ ಸಾಧನೆ ಮಾಡಿರುವುದು ‘ಯುಪಿಎಸ್ ಸಿ ಜಿಹಾದ್’ ಎಂಬ ಕಾರ್ಯಕ್ರಮ ಮಾಡಿ ವಿವಾದಕ್ಕೆ ಕಾರಣವಾಗಿತ್ತು.

ಕಾರ್ಯಕ್ರಮದಲ್ಲಿ ಸುರೇಶ್ ಚಾವಂಕೆ ಮುಸ್ಲಿಮರ ವಿರುದ್ಧ ಯಾವ ರೀತಿಯ ಪೂರ್ವಾಗ್ರಹ ಮನೋಸ್ಥಿತಿ ಹೊಂದಿದ್ದಾನೆ ಎಂಬುದು ಜಗಜ್ಜಾಹೀರಾಯಿತೇ ಹೊರತು, ಕಾರ್ಯಕ್ರಮದಲ್ಲಿ ಉಲ್ಲೇಖಿಸಲಾದ ಯಾವುದೇ ವಿಷಯದಲ್ಲಿ ಸತ್ಯಾಂಶಗಳಿರಲಿಲ್ಲ. ಆದರೆ, ಇದೀಗ ಎನ್ ಇಇಟಿ (ನೀಟ್) ಫಲಿತಾಂಶ ಹೊರಬಿದ್ದ ಬಳಿಕ, ಪರೀಕ್ಷೆಯಲ್ಲಿ ಶೋಯೆಬ್ ಅಫ್ತಾಬ್ ಎಂಬ ಮುಸ್ಲಿಂ ವಿದ್ಯಾರ್ಥಿ ಟಾಪರ್ ಎಂದು ವರದಿಯಾಗುತ್ತಿದ್ದಂತೆ, ವಿಬಂಡನಾತ್ಮಕ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದೆ.

- Advertisement -

ಹಲವಾರು ಟ್ವೀಟಿಗರು ಯಾಕೆ ‘#NEETJihad’ ಟ್ರೆಂಡಿಂಗ್ ಆಗುತ್ತಿಲ್ಲ ಎಂದು ವಿಬಂಡನೆ ಮಾಡಿದ್ದಾರೆ. ಈ ಸಂದೇಶಗಳಲ್ಲಿ ನೀಟ್ ನಲ್ಲಿ ಟಾಪ್ ಐವರು ಮುಸ್ಲಿಮರು ಎಂಬುದಾಗಿ ಹರಡಲಾಗಿತ್ತು. ಶೋಯೆಬ್ ಆಫ್ತಾಬ್, ಝೀಶನ್ ಅಶ್ರಫ್, ಯಾಸೀರ್ ಹಮೀದ್, ಸಾಜಿದ್ ಮೆಹ್ಮೂದ್ ಮತ್ತು ಸನಾ ಮೀರ್ ಮುಂತಾದವರು ನೀಟ್ ನ ಟಾಪ್ 5 ಸಾಧಕರು ಎಂಬ ಸಂದೇಶ ಹರಡಲಾಗಿತ್ತು. ಈ ಪೋಸ್ಟ್ ಅನ್ನು ಹಲವಾರು ಮಂದಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನೀಟ್ ನ ಅಧಿಕೃತ ವೆಬ್ ಸೈಟ್ ಪ್ರಕಾರ, ಶೋಯೆಬ್ ಆಫ್ತಾಬ್, ಆಕಾಂಕ್ಷಾ ಸಿಂಗ್, ತುಮ್ಮಲ ಎಸ್. ನಿಖಿತಾ, ವಿನೀತ್ ಶರ್ಮಾ ಮತ್ತು ಅಮ್ರೀಶಾ ಖೇತಾನ್ ಎಂಬವರು ಟಾಪ್ 5 ಸಾಧಕರು ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನೀಟ್ ಸಾಧಕರ ಪಟ್ಟಿಯಲ್ಲಿ ಶೋಯೆಬ್ ಆಫ್ತಾಬ್ ನಂತರದ ನಾಲ್ಕು ಹೆಸರುಗಳನ್ನು ಕಾಲ್ಪನಿಕವಾಗಿ ಸೃಷ್ಟಿಸಲಾಗಿದೆ. ಆ ಹೆಸರುಗಳು ನೀಟ್ ಪತ್ರಿಕಾ ಹೇಳಿಕೆಯಲ್ಲಿ ಎಲ್ಲೂ ಉಲ್ಲೇಖಿಸಲ್ಪಟ್ಟಿಲ್ಲ.

ಬಿಜೆಪಿ ಬೆಂಬಲಿಗರಾದ ಶೆಫಾಲಿ ವೈದ್ಯ ಮತ್ತು ವಿವೇಕ್ ರಂಜನ್ ಅಗ್ನಿಹೋತ್ರಿ ಮುಂತಾದವರು, ಸಮಾನ ಅಂಕಗಳಿದ್ದರೂ ಆಕಾಂಕ್ಷಾಗೆ ಎರಡನೇ ರ್ಯಾಂಕ್ ನೀಡಿರುವುದನ್ನು ಪ್ರಶ್ನಿಸಿ ಮಾಡಿದ್ದ ಟ್ವೀಟ್ 20,000ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ. ಶೋಯೆಬ್ ಮತ್ತು ಆಕಾಂಕ್ಷಾ ಇಬ್ಬರಿಗೂ 720ರಲ್ಲಿ 720ರಷ್ಟು ಅಂಕಗಳು ಬಂದಿದ್ದರೂ, ಮುಸ್ಲಿಂ ಅಭ್ಯರ್ಥಿಗೆ ಮೊದಲ ಸ್ಥಾನ ನೀಡಲಾಗಿದೆ ಎಂಬರ್ಥದಲ್ಲಿ ಅವರ ಟ್ವೀಟ್ ಗಳು ಹರಿದಾಡಿದ್ದವು.

ಟಾಪ್ 50 ಮಂದಿ ಸಾಧಕರ ಹೆಸರುಗಳ ಮುಂದೆ ಅವರ ಅಂಕಗಳು ಮತ್ತು ರ್ಯಾಂಕ್ ಗಳನ್ನು ಪ್ರಕಟಿಸಲಾಗಿದೆ. ಅವುಗಳಲ್ಲಿ ಟಾಪ್ 20 ಸ್ಥಾನ ಪಡೆದವರನ್ನು ಮೂರು ವಿಭಾಗದಲ್ಲಿ ಸಮಾನಾಂತರ ಅಂಕಗಳನ್ನು ಪಡೆದಿದ್ದರೂ, ಬೇರೆಬೇರೆ 20 ರ್ಯಾಂಕ್ ಗಳನ್ನೇ ನೀಡಲಾಗಿದೆ. ನೀಟ್ ಮಂಡಳಿ ನಿಯಮ ಪ್ರಕಾರ, ಸಮಾನ ಅಂಕಗಳಿದ್ದರೂ, ರ್ಯಾಂಕ್ ಗಳನ್ನು ನೀಡುವಾಗ ಭಿನ್ನ ರ್ಯಾಂಕ್ ಗಳನ್ನು ನೀಡಲಾಗುತ್ತದೆ. ಟೈ ಬ್ರೇಕ್ ಮಾಡಲು ನೀಟ್ ಒಂದರಲ್ಲಿ ಮಾತ್ರ ಈ ನಿಯಮ ಪಾಲಿಸುವುದಲ್ಲ, ಬಹುತೇಕ ಹೆಚ್ಚಿನ ಪರೀಕ್ಷೆಗಳಲ್ಲಿ ಈ ನಿಯಮ ಪಾಲಿಸಲಾಗುತ್ತದೆ.
ಇದು ಗೊತ್ತಿದ್ದರೂ, ಟಾಪರ್ ಮುಸ್ಲಿಂ ಅಭ್ಯರ್ಥಿ ಎಂಬ ಕಾರಣಕ್ಕಾಗಿ ಬಿಜೆಪಿ ಬೆಂಬಲಿಗರು ಅದರಲ್ಲೂ ಕೀಳು ಮಟ್ಟದ ರಾಜಕೀಯ ನಡೆಸಿದ್ದಾರೆ.

ಶೋಯೆಬ್ ಮತ್ತು ಆಕಾಂಕ್ಷಾ ನಡುವೆ ರ್ಯಾಂಕ್ ನೀಡುವಾಗ ಸಮಾನ ಅಂಕಗಳಿದ್ದರೂ, ವಯಸ್ಸನ್ನು ಪರಿಗಣಿಸಿ, ಮೊದಲ ಮತ್ತು ಎರಡನೇ ಸ್ಥಾನವನ್ನು ನೀಡಲಾಗಿತ್ತು.
ಯುಪಿಎಸ್ ಸಿ ಪರೀಕ್ಷೆ ವಿಷಯದಲ್ಲಿ ಮುಸ್ಲಿಮರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬ ‘ಸುದರ್ಶನ್ ನ್ಯೂಸ್’ ಚಾನೆಲ್ ನ ‘ಯುಪಿಎಸ್ ಸಿ ಜಿಹಾದ್’ ಪದಬಳಕೆಯನ್ನು ವಿಡಂಬನೆಗೋಸ್ಕರ, ನೀಟ್ ನಲ್ಲಿ ಐವರು ಮುಸ್ಲಿಂ ಅಭ್ಯರ್ಥಿಗಳು ಟಾಪರ್ ಗಳು ಎಂಬ ಸಂದೇಶವನ್ನು ಹರಡಲಾಗಿತ್ತು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಈ ಎರಡೂ ವಿಚಾರಗಳು ಸುಳ್ಳು ಎಂಬುದು ಸಾಬೀತಾಗಿದೆ.

ನ.17ರಿಂದ ಕಾಲೇಜು ಆರಂಭಿಸುವುದಾಗಿ ಸರಕಾರ ಘೋಷಿಸಿದೆ. ಈ ಬಗ್ಗೆ ಪರ-ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿವೆ. ಕೋವಿಡ್ – 19 ಪ್ರಕರಣಗಳು ಇನ್ನೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿರುವಾಗ ಕಾಲೇಜು ಆರಂಭಿಸಲು ಸರಕಾರ ನಿರ್ಧಾರ ಕೈಗೊಂಡಿರುವುದು ಸರಿಯೇ? ತಪ್ಪೇ? ಎಂಬ ಬಗ್ಗೆ ‘ಪ್ರಸ್ತುತ’ ಜನಾಭಿಮತ ಸಂಗ್ರಹಿಸುತ್ತಿದೆ. ಈ ಬಗ್ಗೆ ನಿಮ್ಮ ನಿಲುವನ್ನು ‘ಪ್ರಸ್ತುತ’ ಫೇಸ್ ಬುಕ್ ಪೇಜ್ ನಲ್ಲಿ ವ್ಯಕ್ತಪಡಿಸಿ.

https://www.facebook.com/2171161852895947/posts/3694124020599715/

- Advertisement -