► ಭಾರತಕ್ಕೆ ಬಂಗಾರದ ಕಿರೀಟ ತೊಡಿಸಿದ ನೀರಜ್ ಚೋಪ್ರಾ
ಟೋಕಿಯೋ : ನೂರ ಮೂವತ್ತು ಕೋಟಿ ಭಾರತೀಯರು 125 ವರ್ಷಗಳಿಂದ ಕಾಯುತ್ತಿದ್ದ ಆ ಕ್ಷಣ ಕೊನೆಗೂ ನನಸಾಗಿದೆ.
ಒಲಿಂಪಿಕ್ಸ್ ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಚಿನ್ನದ ಪದಕ ಗೆದ್ದ ಸುವರ್ಣ ಕ್ಷಣಕ್ಕೆ ಟೋಕಿಯೋ ಸಾಕ್ಷಿಯಾಗಿದೆ. ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ನೀರಜ್ ಚೋಪ್ರಾ ತನ್ನ ಪ್ರತಿಸ್ಪರ್ಧಿಗಳನ್ನು ಬಹುದೂರ ಹಿಂದಿಕ್ಕಿ ಸ್ವರ್ಣ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಶನಿವಾರ ನಡೆದ ಫೈನಲ್ ನಲ್ಲಿ ಚೋಪ್ರಾ ತನ್ನ ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನೂರ ಮೂವತ್ತು ಕೋಟಿ ಭಾರತೀಯರ ಅಭಿಲಾಷೆಯನ್ನು ಪೂರ್ತಿಗೊಳಿಸಿದ್ದಾರೆ. ಪೈನಲ್ ನ ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಎಸೆದಿದ್ದ ಚೋಪ್ರಾ, ಚಿನ್ನದ ಗುರಿಯನ್ನು ಸ್ಪಷ್ಟಪಡಿಸಿದ್ದರು. ಆದರೆ ಮೂರನೇ ಪ್ರಯತ್ನದಲ್ಲಿ ಸ್ವಲ್ಪ ಹಿನ್ನಡೆಯನ್ನು ಕಂಡ ಚೋಪ್ರಾ, 76. 79 ಮೀಟರ್ ಎಸೆಯಲಷ್ಟೇ ಶಕ್ತರಾದರು. ಆದರೂ ಮೊದಲನೇ ಸ್ಥಾನವನ್ನು ಉಳಿದ ಸ್ಪರ್ಧಿಗಳಿಗೆ ಬಿಟ್ಟುಕೊಡಲಿಲ್ಲ. ಅಧಿಕಾರಯುತವಾಗಿಯೇ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್’ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಅರ್ಹತಾ ಸುತ್ತಿನಲ್ಲಿ 86. 59 ಮೀ. ದೂರಕ್ಕೆ ಜಾವೆಲಿನ್ ಎಸೆದು ಅಗ್ರಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದ ನೀರಜ್ ಭಾರತಕ್ಕೆ ಬಂಗಾರ ತಂದುಕೊಡುವ ಎಲ್ಲಾ ಸಾಧ್ಯತೆಗಳನ್ನು ತೆರೆದಿಟ್ಟಿದ್ದರು. ಇದೀಗ ಫೈನಲ್ ನಲ್ಲಿ 87. 58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಭಾರತೀಯರ ಬಂಗಾರದ ಪದಕದ ಬರವನ್ನು ನೀಗಿಸಿದರು. ಫೈನಲ್’ ನಲ್ಲಿ ಚೋಪ್ರಾಗೆ ಸವಾಲೊಡ್ಡಲಿದ್ದಾರೆ ಎಂದು ನಿರೀಕ್ಷಿಸಿಲಾಗಿದ್ದ ವಿಶ್ವ ಚಾಂಪಿಯನ್ ಜೊಹಾನೆಸ್ ವೆಟ್ಟರ್ 9ನೇ ಕ್ರಮಾಂಕದಲ್ಲಿ ಸ್ಪರ್ಧೆ ಮುಗಿಸುವ ಮೂಲಕ ತೀವ್ರ ನಿರಾಸೆ ಅನುಭವಿಸಿದರು.
ಜಾವೆಲಿನ್ ಥ್ರೊ ವಿಭಾಗದಲ್ಲಿ ಜೆಕ್ ರಿಪಬ್ಲಿಕ್ ನ ಜಾಕುಬ್ ವಡ್ಲೆಜ್ ಬೆಳ್ಳಿ ಪದಕವನ್ನು ಜಯಿಸಿಕೊಂಡರೆ , ಕಂಚಿನ ಪದಕವನ್ನು ಜೆಕ್ ರಿಪಬ್ಲಿಕ್ ನ ವೆಟೆಝ್ಲಾವ್ ವೆಸ್ಲೆ ತನ್ನದಾಗಿಸಿಕೊಂಡರು.
.