ಗ್ರಾಮದ ಏಳಿಗೆಗೆ ಅಗತ್ಯ ಕ್ರಮ: ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್

Prasthutha|

ಮಂಗಳೂರು: ಸರ್ಕಾರದ ವಿವಿಧ ಇಲಾಖೆಗಳಿಂದ ಜನಸಾಮಾನ್ಯರಿಗೆ ಆಗಬೇಕಿರುವ ಕೆಲಸ ಕಾರ್ಯಗಳನ್ನು ಸುಗಮವಾಗಿ ಗ್ರಾಮಮಟ್ಟದಲ್ಲಿಯೇ ಮಾಡಿಕೊಡಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಸರ್ಕಾರ ಜಾರಿಗೊಳಿಸಿದೆ. ಗ್ರಾಮಸ್ಥರ ಅಹವಾಲುಗಳನ್ನು ಸ್ಥಳದಲ್ಲಿಯೇ ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಾಗುತ್ತಿದೆ, ಕೆಲವೊಂದು ಕಠಿಣ ಸಮಸ್ಯೆಗಳಿದ್ದರೆ ಅವುಗಳನ್ನು ರಾಜ್ಯ ಮಟ್ಟದಲ್ಲಿ ಕ್ರಮಕ್ಕೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಹೇಳಿದರು.
ಅವರು ಶನಿವಾರ ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಹಾಲೆ ಮಜಲಿನ ಶ್ರೀ ವೆಂಕಟೇಶ್ವರ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿನ ಅಹವಾಲುಗಳ ಪರಿಹಾರಕ್ಕೆ ಸ್ಥಳೀಯ ಗ್ರಾಮಸ್ಥರು ನೀಡಿರುವ ಅರ್ಜಿಗೆ ಸಂಬಂಧಿದ ಇಲಾಖೆಯವರು ಸ್ಥಳದಲ್ಲಿ ಕ್ರಮ ಜರುಗಿಸಿ ಪರಿಹಾರ ಕಲ್ಪಿಸಲು ಅಧಿಕಾರಿಗಳೆಲ್ಲರೂ ಬಂದಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು ನಾಲ್ಕೂರಿನ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಲಿಕಲಿ ಕೊಠಡಿಯ ದುರಸ್ಥಿ, ಅಪಾಯಕಾರಿ ಮರಗಳ ತೆರವು, ಪ್ರತ್ಯೇಕ ನಾಲ್ಕೂರು ಗ್ರಾಮ ಪಂಚಾಯತ್ ಮಾಡಬೇಕೆಂಬ ಗ್ರಾಮಸ್ಥರ ಅಹವಾಲಿಗೆ ಈ ಬಗ್ಗೆ ಸರ್ಕಾರಕ್ಕೆ ಗಮನ ಸೆಳೆಯುವುದಾಗಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಡಿಡಿಎಲ್ಆರ್ ನಿರಂಜನ್, ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ಆಚಳ್ಳಿ ಉಪಾಧ್ಯಕ್ಷೆ ಪ್ರಮೀಳಾ ವೇದಿಕೆಯಲ್ಲಿದ್ದರು. ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

- Advertisement -