Home ಟಾಪ್ ಸುದ್ದಿಗಳು ಉದ್ದ ಕೂದಲಿಗೆ ಕತ್ತರಿ, ಎರಡು ಕೋಟಿ ಕಟ್ಟಿರಿ ಎಂದ ಗ್ರಾಹಕ ಮಂಡಳಿ

ಉದ್ದ ಕೂದಲಿಗೆ ಕತ್ತರಿ, ಎರಡು ಕೋಟಿ ಕಟ್ಟಿರಿ ಎಂದ ಗ್ರಾಹಕ ಮಂಡಳಿ

ದೆಹಲಿ: ಸಂಪಾದನೆಗೆ ದಾರಿಯಾಗಿದ್ದ ಮಹಿಳೆಯ ಉದ್ದ ಕೂದಲಿಗೆ ಕತ್ತರಿ ಹಾಕಿದ್ದ ಲಗ್ಝುರಿ ಹೋಟೆಲಿಗೆ ಎರಡು ಕೋಟಿ ರೂಪಾಯಿ ದಂಡ ವಿಧಿಸಿ ದೆಹಲಿ ಗ್ರಾಹಕ ಮಂಡಳಿ ಆದೇಶಿಸಿದೆ. ಮಾಡೆಲ್ ಒಬ್ಬಳ ಕೂದಲನ್ನು ಇಷ್ಟ ಬಂದಂತೆ ಕತ್ತರಿಸಿ ಅವರ ಸಂಪಾದನೆಯ ದಾರಿ ಮುಚ್ಚಿದ್ದಲ್ಲದೆ, ಅವರು ಮಾನಸಿಕವಾಗಿ ಕೊರಗುವಂತೆ ಮಾಡಿದ್ದಕ್ಕಾಗಿ ಈ ಎರಡು ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಎನ್ ಸಿ ಡಿಆರ್ ಸಿ – ರಾಷ್ಟ್ರೀಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ಕೆ.ಅಗರ್ವಾಲ್ ಮತ್ತು ಸದಸ್ಯ ಡಾ.ಎಸ್.ಎಂ.ಕಂಟಿಕರ್ ಹೇಳಿದ್ದಾರೆ.


ಸಂತ್ರಸ್ತೆ ಮಾಡೆಲ್ ಉದ್ದ ಕೂದಲ ಕಾರಣಕ್ಕೆ ಹೇರ್ ಆಯಿಲ್ ಗೆ ಮಾಡೆಲ್ ಆಗಿ ಕೈತುಂಬಾ ಸಂಪಾದಿಸುತ್ತಿದ್ದರು. ಅದೇ ವೇಳೆ ಉನ್ನತ ಮ್ಯಾನೇಜಿಂಗ್ ಹುದ್ದೆಯಲ್ಲಿದ್ದು, ಒಳ್ಳೆಯ ಸಂಬಳ ಪಡೆಯುತ್ತಿದ್ದರು. ಮೂರು ವರುಷಗಳ ಹಿಂದೆ ಈ ಮಾಡಲ್ ಲಗ್ಝುರಿ ಹೋಟೆಲ್ ಒಂದರ ಸಲೂನಿಗೆ ಹೋಗಿ ಕೆಲವು ಕೂದಲನ್ನು ಟ್ರಿಮ್ ಮಾಡಲು ಬಯಸಿದರು. ಆದರೆ ಸಲೂನಿನವರು ಮುಖ್ಯವಾದ ಉದ್ದ ಕೂದಲಿಗೇ ಕತ್ತರಿ ಹಾಕಿದ್ದರು.


ಇದರಿಂದ ಆ ಮಾಡೆಲ್ ಜಾಹೀರಾತಿನಲ್ಲಿ ನಟಿಸುವ ಅವಕಾಶ ಕಳೆದುಕೊಂಡರು. ಜೊತೆಗೆ ಮಾನಸಿಕವಾಗಿ ಕುಸಿದು, ಮನಸ್ಸಿಟ್ಟು ಕೆಲಸ ಮಾಡಲಾಗದೆ ಸಂಬಳದ ಕೆಲಸವನ್ನೂ ಕಳೆದುಕೊಂಡರು. ಹೋಟೆಲಿನವರು ಮತ್ತು ಅವರ ವಕೀಲರು ಆಕೆ ಹೇಳಿದಂತೆಯೇ ಕೂದಲು ಕತ್ತರಿಸಲಾಗಿದೆ ಎಂದು ವಾದಿಸಿದರು. ಕೂದಲು ಜಾಹೀರಾತು ನೀಡುವ ಮಾಡೆಲ್ ಉದ್ದ ಕೂದಲು ಕತ್ತರಿಸಲು ಹೇಳುತ್ತಾರೆಯೇ ಎಂಬ ನ್ಯಾಯಮಂಡಳಿ ಪೀಠದ ಪ್ರಶ್ನೆಗೆ ಹೋಟೆಲ್ ನವರಲ್ಲಿ ಉತ್ತರ ಇರಲಿಲ್ಲ.


ಆಯೋಗ ಕೂಡಲೆ ಹೋಟೆಲಿನವರು ಸಂತ್ರಸ್ತೆ ಮಾಡೆಲ್ ಗೆ 2 ಕೋಟಿ ರೂಪಾಯಿ ನೀಡುವಂತೆ ಆದೇಶಿಸಿದ್ದಾರೆ. ಎಂಟು ವಾರದೊಳಗೆ ಪರಿಹಾರಧನ ಸಲ್ಲಿಸುವಂತೆಯೂ ಹೇಳಲಾಗಿದೆ.

Join Whatsapp
Exit mobile version