ನಾಗ್ಪುರ: ಪ್ರಕರಣ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದ್ದರಿಂದ ನಕ್ಸಲ್ ನಂಟು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ದಿಲ್ಲಿ ವಿವಿಯ ಮಾಜಿ ಪ್ರೊಫೆಸರ್ ಜಿ ಎನ್ ಸಾಯಿಬಾಬಾ ಹಾಗೂ ಐದು ಮಂದಿ ಇತರರನ್ನು ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠ ಮಂಗಳವಾರ ಖುಲಾಸೆಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿನಯ್ ಜೋಷಿ ಮತ್ತು ವಾಲ್ಮೀಕಿ ಎಸ್ ಎ ಮೆನೆಜೆಸ್ ಅವರ ಪೀಠ ಈ ತೀರ್ಪು ಪ್ರಕಟಿಸಿದೆ.
ಜಿ ಎನ್ ಸಾಯಿಬಾಬಾ ಮತ್ತು ಇತರರನ್ನು 2014ರಲ್ಲಿ ಬಂಧಿಸಲಾಗಿತ್ತು. ಅವರು ಸಿಪಿಐ (ಮಾವೋವಾದಿ) ಗುಂಪಿಗೆ ಆರ್ಡಿಎಫ್ ನಂತಹ ಸಂಘಟನೆಗಳ ಮುಖಾಂತರ ಕೆಲಸ ಮಾಡುತ್ತಿದ್ದರು ಹಾಗೂ ಅಬುಜ್ಮದ್ ಅರಣ್ಯ ಪ್ರದೇಶದಲ್ಲಿ ಅಡಗಿರುವ ನಕ್ಸಲರಿಗೆಂದು ಸಾಯಿಬಾಬಾ ಅವರು 16ಜಿಬಿ ಮೆಮೊರಿ ಕಾರ್ಡ್ ನೀಡಿದ್ದರೆಂದೂ ಆರೋಪಿಸಲಾಗಿತ್ತು. ‘ಆರೋಪಿಗಳ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ’ ಎಂದು ಹೈಕೋರ್ಟ್ ಹೇಳಿದೆ.