Home ಟಾಪ್ ಸುದ್ದಿಗಳು ಮಾದಕ ದ್ರವ್ಯ ಇಟ್ಟು ಮೊಕದ್ದಮೆಗೆ ಸಿಕ್ಕಿಸುವ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ: ನವಾಬ್ ಮಲಿಕ್

ಮಾದಕ ದ್ರವ್ಯ ಇಟ್ಟು ಮೊಕದ್ದಮೆಗೆ ಸಿಕ್ಕಿಸುವ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ: ನವಾಬ್ ಮಲಿಕ್

ಮುಂಬೈ: ನನಗೆ ಒಂದು ಅನಾಮಧೇಯ ಕಾಗದ ಬಂದಿದೆ. ಎನ್ ಸಿಬಿ ಪಶ್ಚಿಮ ವಲಯ ಕಚೇರಿಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ತಂಡವು ಮಾದಕ ದ್ರವ್ಯದ ಹೆಸರಿನಲ್ಲಿ ಹೆದರಿಸಿ, ತಾವೇ ಮಾದಕ ವಸ್ತು ಇಟ್ಟು, ಸುಳ್ಳು ಮೊಕದ್ದಮೆ ದಾಖಲಿಸುತ್ತಾರೆ. ಅಂಥ 24 ಮೊಕದ್ದಮೆಗಳ ಬಗ್ಗೆ ಪತ್ರದಲ್ಲಿ ಹೇಳಲಾಗಿದೆ ಎಂದು ಎನ್ ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ.


ಎನ್ ಸಿಬಿ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಒಂದು ಪತ್ರದ ಮೂಲಕ ಇದನ್ನು ನಿರಾಕರಿಸಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ. ಮಾಲಿಕ್ ಪಟ್ಟಿಯಲ್ಲಿರುವ 24ರಲ್ಲಿ 20 ಹೆಸರುಗಳ ಕೋರ್ಟ್ ದಾಖಲೆಗಳನ್ನು ಮಾಧ್ಯಮವೊಂದು ಪರಿಶೀಲಿಸಿದೆ. ನಾಲ್ಕರ ಬಗೆಗೆ ಸೂಕ್ತ ಮಾಹಿತಿ ದೊರೆತಿಲ್ಲ. ಉಳಿದವುಗಳಲ್ಲಿ ಎನ್ ಸಿಬಿ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿದ್ದು ವಿಚಾರಣೆಗೆ ಕಾದಿದೆ. ಈ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ 93 ಜನರನ್ನು ಬಂಧಿಸಲಾಗಿದೆ. ಅವರಲ್ಲಿ 39 ಮಂದಿ ಜಾಮೀನು ಪಡೆದು ಹೊರಗಿದ್ದಾರೆ.


ಕಳೆದ ವರುಷ ಬಾಲಿವುಡ್ ನ ಡ್ರಗ್ಸ್ ಕೋಟೆ ಉರುಳಿಸುವುದಾಗಿ ಎನ್ ಸಿಬಿ ಹೇಳಿದ್ದರ ಪ್ರಕಾರ ಇವುಗಳಲ್ಲಿ ಕೆಲವು ಈಗಾಗಲೇ ಹೆಚ್ಚು ಪ್ರಚಾರ ಪಡೆದಿರುವ ಪ್ರಕರಣಗಳಾಗಿವೆ. ಅತಿ ದೊಡ್ಡ ಪ್ರಕರಣವೆಂದರೆ ಎಂದರೆ ನಟಿ ರಿಯಾ ಚಕ್ರವರ್ತಿಯ ಬಂಧನ. ವಾಂಖೆಡೆ ಮೇಲಿರುವ ಆರೋಪವೆಂದರೆ ಬೇಕೆಂದೇ ಆತನು ರಿಯಾ ಮತ್ತಾಕೆಯ ಸಹೋದರ ಶೋವಿಕ್ ಹೆಸರನ್ನು ಆರೋಪಿಗಳಾದ ಕರಣ್ ಅಜೋರಾ, ಜೈದ್ ವಯ್ಲಾತ್ರ, ಅಬ್ಬಾಸ್ ಲಖಾನಿಯವರ ಜೊತೆ ಸೇರಿಸಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸಿನಲ್ಲಿ ಬಂಧಿತರಿವರು. ಈ ಐವರೂ ಜಾಮೀನಿನ ಮೇಲೆ ಹೊರಗಿದ್ದಾರೆ.


ಮತ್ತೆ ಕೆಲವರು ಉದಾಹರಣೆಗೆ ಈ ಮೊಕದ್ದಮೆಯಲ್ಲಿ ಬಂಧಿತನಾದ ರಜಪೂತ್ ಗೆಳೆಯ ಸಿದ್ಧಾರ್ಥ್ ಪಿತಾನಿ ಇನ್ನೂ ಸೆರೆಮನೆಯಲ್ಲಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ಎನ್ ಸಿಬಿ 33 ಮಂದಿ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ್ದು ವಿಚಾರಣೆ ಇನ್ನೂ ಆರಂಭವಾಗಬೇಕಾಗಿದೆ.


ಇನ್ನೊಂದು ಮೊಕದ್ದಮೆಯಲ್ಲಿ ಪಿಎಸ್ ಯು ಅಗ್ನಿ ಶಮನ ಸೇವೆಯ ಅಧಿಕಾರಿ ಮತ್ತಿಬ್ಬರ ಮೇಲಿನದು. ಈ ವರುಷ ಜನವರಿಯಲ್ಲಿ ಈ ಮೂವರ ಬಂಧನವಾಗಿದೆ. ಅವರಲ್ಲಿಬ್ಬರು ಜಾಮೀನಿನಲ್ಲಿ ಹೊರಗಿದ್ದಾರೆ. ಇದರಲ್ಲಿ ಎನ್ ಸಿಬಿಯವರು 61 ಗ್ರಾಂ ಮೆಪೆಡ್ರೋನ್ ಇಟ್ಟು ಸಿಕ್ಕಿಸಿದ್ದಾರೆ ಎನ್ನುವುದಾಗಿದೆ. ಇನ್ನೊಂದು ಮೊಕದ್ದಮೆಯು ನಟ ಗೌರವ್ ದೀಕ್ಷಿತ್ ಅಲಿಯಾಸ್ ಶಿವಾಯ್ ಶರ್ಮಾ ಮಾದಕ ದ್ರವ್ಯ ಸಾಗಣೆಯ ಶಾದಾಬ್ ಶೇಖ್ ಅಲಿಯಾಸ್ ಶಾದಾದ್ ಬಟಾಟಾ ಬಗೆಗಿನದಾಗಿದೆ. ನಗರದ ಪಡುವಣ ಹೊರ ವಲಯಕ್ಕೆ ಮಾದಕ ದ್ರವ್ಯ ಪೂರೈಸುತ್ತಿದ್ದರು ಎಂದು ಇವರ ಮೇಲೆ ಎನ್ ಸಿಬಿ ಆರೋಪಿಸಿದೆ. ದೀಕ್ಷಿತ್ ಗೆ ಕಳೆದ ತಿಂಗಳು ಜಾಮೀನು ದೊರೆತಿದೆ.

ಎನ್ ಸಿಬಿ ಮಂದಿ ಮಾದಕ ದ್ರವ್ಯ ಕಳ್ಳ ಸಾಗಣೆದಾರರಿಂದ ಮೆಪೆಡ್ರೋನ್ ಪಡೆದು ಶೇಕ್ ಮನೆಯಲ್ಲಿ ಇಟ್ಟು ಆತನನ್ನು ಬಂಧಿಸಿದರು ಎಂಬುದು ದೂರು. ಈ ಮೊಕದ್ದಮೆಗಳಲ್ಲಿ ಒಂದರ ಆರೋಪಿಯು ಎನ್ ಸಿಬಿ ಕಚೇರಿಯಲ್ಲೇ ಟಾಯ್ಲೆಟ್ ಕ್ಲೀನರ್ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದರು. ಎನ್ ಸಿಬಿಯವರ ಹೇಳಿಕೆಯಂತೆ ಆತನನ್ನು ಮತ್ತಿಬ್ಬರನ್ನು ಈ ಕೇಸಿನಲ್ಲಿ 16 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ಮೆಪೆಡ್ರೋನ್ ಹೊಂದಿದ್ದ ಕಾರಣಕ್ಕೆ ಬಂಧಿಸಲಾಗಿತ್ತು. ಎನ್ ಸಿಬಿಯವರೇ ಈ ಮಾದಕ ದ್ರವ್ಯ ಇಟ್ಟಿದ್ದರು ಎಂಬುದು ಆರೋಪವಾಗಿದೆ.


ಇನ್ನೊಂದು ಮೊಕದ್ದಮೆಯೆಂದರೆ ಡೋಂಗ್ರಿಯ ಒಂದು ಮನೆಯ ಮೇಲೆ ಎನ್ ಸಿಬಿ ದಾಳಿ ಮಾಡಿದಾಗ ಅಲ್ಲಿ ಎಲ್ ಎಸ್ ಡಿ ದೊರೆತ ಬಗೆಗಿನದಾಗಿದೆ. ಈ ಮೊಕದ್ದಮೆಯಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಇಬ್ಬರು ಜಾಮೀನು ಪಡೆದು ಹೊರಗಿದ್ದಾರೆ. ಆ ಮನೆಯ ಯಜಮಾನ ಮತ್ತು ಇನ್ನೊಬ್ಬರು ಜೈಲಲ್ಲಿ ಇದ್ದಾರೆ. ಆದರೆ ಎನ್ ಸಿಬಿಯವರು 1.2 ಗ್ರಾಂ ಮೆಪೆಡ್ರೋನ್ ಮತ್ತು 17 ಬ್ಲಾಟ್ ಎಲ್ ಎಸ್ ಡಿ ಇಟ್ಟು ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ. ಇನ್ನೊಂದು ದೂರು ಎಂದರೆ ಈ ಮನೆಯಲ್ಲಿ ಎನ್ ಸಿಬಿಯವರು 17 ಲಕ್ಷ ರೂಪಾಯಿ ವಶಪಡಿಸಿಕೊಂಡು ರೂ. 9 ಲಕ್ಷ ಮಾತ್ರ ಲೆಕ್ಕ ಕೊಟ್ಟಿದ್ದಾರೆ. ಉಳಿದುದನ್ನು ಎನ್ ಸಿಬಿ ಅಧಿಕಾರಿಗಳು ಸ್ವಾಹಾ ಮಾಡಿದ್ದಾರೆ. ನವಾಬ್ ಮಾಲಿಕ್ ರ ಅಳಿಯ ಸಮೀರ್ ಖಾನ್ ಮೊಕದ್ದಮೆಯಲ್ಲಿ ಬಂಧಿತರಾಗಿದ್ದ ಆತ ಮತ್ತು ಐದು ಜನರಿಗೆ ಕಳೆದ ತಿಂಗಳು ಎನ್ ಡಿಪಿಎಸ್ ಕೋರ್ಟು ಜಾಮೀನು ನೀಡಿದೆ. ಇವರ ಮೇಲಿನ ಚಾರ್ಜ್ ಶೀಟ್ ಏನೆಂದರೆ 200 ಗ್ರಾಂ ಗಾಂಜಾವನ್ನು ಹೊಗೆಸೊಪ್ಪು ಎಂದು ಇಟ್ಟುಕೊಂಡಿದ್ದದ್ದು.


ಈ ಪಟ್ಟಿಯಲ್ಲಿನ ಇನ್ನೊಬ್ಬ ವ್ಯಕ್ತಿ ಹೃದಯದ ತೊಂದರೆ ಮತ್ತು ಮಾನಸಿಕ ತೊಂದರೆ ಇರುವವರು. ಚರಸ್ ಹೊಂದಿದ್ದರು ಎಂದು ಕಳೆದ ಡಿಸೆಂಬರ್ ನಲ್ಲಿ ಇನ್ನೊಬ್ಬರೊಡನೆ ಇವರನ್ನು ಬಂಧಿಸಲಾಗಿತ್ತು. ಎನ್ ಸಿಬಿಯವರು ಈ ಮಾನಸಿಕ ಬಾಧಿತನ ತಂದೆಯಿಂದ 20ರಿಂದ 25 ಲಕ್ಷ ರೂಪಾಯಿ ಪಡೆಯಲು ಹುನ್ನಾರ ನಡೆಸಿದ್ದಾರೆ ಎಂದು ದೂರಲಾಗಿದೆ. ಆ ತಂದೆ ವಾಂಖೇಡೆಗೆ ದೂರಿತ್ತರು, ಆದರೆ ಅವರು ಆ ಬಗೆಗೆ ತಲೆ ಕೆಡಿಸಿಕೊಂಡಿಲ್ಲ. ಇದರಲ್ಲಿನ ಆರೋಪಿಗಳು ಇನ್ನೂ ತಲೋಜಾ ಸೆರೆಮನೆಯಲ್ಲಿ ಇದ್ದಾರೆ.


ಈ ಮಧ್ಯೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿರುವ ನವಾಬ್ ಮಲಿಕ್, ಕೊರ್ಡೆಲಿಯಾ ಕ್ರೂಸ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಸಲು ಕಾರ್ಯಕ್ರಮ ಆಯೋಜಕರು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯದ ವ್ಯಾಪ್ತಿಯಲ್ಲಿರುವ ಹಡಗು ನಿರ್ದೇಶನಾಲಯದಿಂದ ಅನುಮತಿ ಪಡೆದಿದ್ದಾರೆಯೇ ಹೊರತು, ಮಹಾರಾಷ್ಟ್ರ ಪೊಲೀಸ್ ಅಥವಾ ರಾಜ್ಯದ ಗೃಹ ಇಲಾಖೆಯಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Join Whatsapp
Exit mobile version