ಹಾವೇರಿ: ಉಕ್ರೇನ್‌ನಲ್ಲಿ ರಷ್ಯಾ ಸೇನೆಯ ಶೆಲ್ ದಾಳಿಗೆ ಬಲಿಯಾಗಿ ಮೃತಪಟ್ಟ ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿ ನವೀನ್ ರ ಮೃತದೇಹ 21 ದಿನಗಳ ಬಳಿಕ ತಾಯ್ನಾಡಿಗೆ ಬರುತ್ತಿದೆ.
ಭಾನುವಾರ ಮುಂಜಾನೆ 3 ಗಂಟೆಗೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಮೃತದೇಹ ಬರಲಿದ್ದು, ಸಂಜೆ ಹೊತ್ತಿಗೆ ಹುಟ್ಟೂರಿಗೆ ಕಳುಹಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮೃತದೇಹವನ್ನು ದಾವಣಗೆರೆಯ ಎಸ್ಎಸ್ ಮೆಡಿಕಲ್ ಕಾಲೇಜಿಗೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಾಯವಾಗಲು ದಾನ ಮಾಡಲಾಗುವುದು ಎಂದು ನವೀನ್ ತಂದೆ ಶೇಖರಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಮ್ಮ ಮಗನಿಗೆ ವೈದ್ಯಕೀಯ ಜನರ ಸೇವೆ ಮಾಡಬೇಕೆಂಬ ಆಸೆಯಿತ್ತು, ಅವನ ಆಸೆ ಈಡೇರಲಿಲ್ಲ, ಅವನ ಮೃತದೇಹವನ್ನು ಇಟ್ಟುಕೊಂಡು ವೈದ್ಯಕೀಯ ಕೋರ್ಸ್ ಕಲಿಯುವ ಮಕ್ಕಳಿಗಾದರೂ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಾಲೇಜಿಗೆ ನೀಡಲು ನಾವೆಲ್ಲರೂ ಸೇರಿ ನಿರ್ಧರಿಸಿದ್ದೇವೆ ಎಂದು ಹೇಳಿದರು.