ಮಂಗಳೂರು: ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ನಿರ್ಲಕ್ಷ್ಯ, ತಪ್ಪಾದ ಚಿಕಿತ್ಸೆಗೆ ಕಾಲು ಕಳೆದುಕೊಂಡ ಕುರ್ನಾಡು ಗ್ರಾಮದ ನೌಷಾದ್ ಎಂಬ ಯುವಕನಿಗೆ ಪರಿಹಾರ ಒದಗಿಸಲು ಆಗ್ರಹಿಸಿ ನಾಗರಿಕ ಸಮಿತಿ ಮಾರ್ಚ್ 14ರಂದು ದೇರಳಕಟ್ಟೆಯಲ್ಲಿ ಹಮ್ಮಿಕೊಂಡಿರುವ ಬೃಹತ್ ಸಾಮೂಹಿಕ ಪ್ರತಿಭಟನೆಗೆಎಸ್ ಡಿಪಿಐ ಬೆಂಬಲ ಸೂಚಿಸಿದೆ ಎಂದು ಎಸ್ ಡಿಪಿಐ ಮಂಗಳೂರು ವಿಧಾನಸಭೆಯ ಅಧ್ಯಕ್ಷ ಇರ್ಶಾದ್ ಅಜ್ಜಿನಡ್ಕ ಹೇಳಿದ್ದಾರೆ.
ಕೆ. ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ತಪ್ಪು ಚಿಕಿತ್ಸೆ, ಗಂಭೀರ ಕರ್ತವ್ಯ ಲೋಪ, ನಿರ್ಲಕ್ಷ್ಯದಿಂದಾಗಿ ನೌಷಾದ್ ತನ್ನ ಎಡಗಾಲನ್ನು ಕಳೆದುಕೊಂಡಿದ್ದಾರೆ. ಆಗಿರುವ ತಪ್ಪಿಗಾಗಿ ಪರಿಹಾರ ಧನ ಕೊಡುವುದಾಗಿ ಒಪ್ಪಿಕೊಂಡು ಆಸ್ಪತ್ರೆ ಆಡಳಿತ ಒಂದು ವರ್ಷಕ್ಕೂ ಹೆಚ್ಚು ಕಾಲ ನೌಷಾದ್ ಅವರನ್ನು ಅಲೆದಾಡಿಸಿ ಈಗ ನಡು ಬೀದಿಯಲ್ಲಿ ಕೈಬಿಟ್ಟಿದೆ ಎಂದು ಸಂತ್ರಸ್ತ ಕುಟುಂಬ ಆಪಾದಿಸಿದೆ.