Home ಟಾಪ್ ಸುದ್ದಿಗಳು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್: ಬಿಪಿಸಿಎಲ್ ಕೇರಳ ಮುಡಿಗೆ ಪ್ರಶಸ್ತಿ

ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್: ಬಿಪಿಸಿಎಲ್ ಕೇರಳ ಮುಡಿಗೆ ಪ್ರಶಸ್ತಿ

ಸುಳ್ಯ: ಸುಳ್ಯದಲ್ಲಿ ನಡೆದ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಕೇರಳ ತಂಡಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ. ಪುರುಷರ ವಿಭಾಗದಲ್ಲಿ ಬಿಪಿಸಿಎಲ್ ಕೊಚ್ಚಿನ್  ಮಹಿಳೆಯರ ವಿಭಾಗದಲ್ಲಿ ಕೇರಳ ಪೊಲೀಸ್ ತಂಡವು ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ಜಿದ್ದಾಜಿದ್ದಿನಿಂದ ಕೂಡಿದ್ದ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಿದ ಪೋಸ್ಟಲ್ ಕರ್ನಾಟಕ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.  ಯುನೈಟೆಡ್ ಸ್ಪೈಕರ್ಸ್ ಗುಜರಾತ್ ತೃತೀಯ ಮತ್ತು ಕೆಎಸ್ ಇಬಿ ತಿರುವನಂತಪುರಂ ಚತುರ್ಥ ಸ್ಥಾನ ಗಳಿಸಿತು.

ಭಾನುವಾರ ರಾತ್ರಿ ನಿರಂತರ ಮಳೆಯಿಂದಾಗಿ ಅಡಚಣೆಗೊಳಗಾದ ಪಂದ್ಯ ತಡರಾತ್ರಿಯವರೆಗೂ ಮುಂದುವರೆಯಿತು. 5 ಸೆಟ್ ಗಳ (25-20,21-25,25-17, 22-25,15-12) ಮ್ಯಾರಥಾನ್ ಹೋರಾಟದಲ್ಲಿ 3-2 ಸೆಟ್ ಗಳ ಅಂತರದಲ್ಲಿ ಅಂತರದಲ್ಲಿ ಪೋಸ್ಟಲ್ ಕರ್ನಾಟಕವನ್ನು ಮಣಿಸಿ ಚಾಂಪಿಯನ್ ಆಗಿ ಸಂಭ್ರಮಿಸಿತು. 

ಅಂತಾರಾಷ್ಟ್ರೀಯ ಸ್ಟಾರ್ ಆಟಗಾರ ಜೆರೋಂ ವಿನೀತ್ ಅವರ ಸಿಡಿಲಬ್ಬರದ ಸ್ಮಾಶ್ ಗಳು, ಜಾನ್ ಜೋಸೆಪ್ ಅದ್ಭುತ ತಡೆ ಹಾಗೂ ಲಿಬರೊ ಪ್ರಭಾಕರನ್ ಉತ್ತಮ ಪಾಸ್ ಮೂಲಕ ಅಂಕಗಳನ್ನು ಕಲೆ ಹಾಕಿತು. ನಾಯಕ ಮುತ್ತುಸ್ವಾಮಿ ಶಕ್ತಿಶಾಲಿ ಸರ್ವ್ ಪಂದ್ಯಾಟದ ಹೈಲೈಟ್ಸ್ ಆಗಿತ್ತು.  ಅಂತಾರಾಷ್ಟ್ರೀಯ ಆಟಗಾರ ಕಾರ್ತಿಕ್ ನೇತೃತ್ವದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಕರ್ನಾಟಕ ಪಂದ್ಯದುದ್ದಕ್ಕೂ ಸಮಬಲದ ಹೋರಾಟ ನೀಡಿತ್ತು. ರೈಸನ್ ರೆಬೆಲ್ಲೊ ವಿನಾಯಕ್, ವರುಣ್ ಅಂಕಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದರು.

ಮೂರನೇ ಸೆಟ್ ನಲ್ಲಿ ಉಭಯ ತಂಡಗಳ ಆಟಗಾರರು ಒಂದೊಂದು ಅಂಕ ಗಳಿಸಲು ಸಾಕಷ್ಟು ಶ್ರಮ ವಹಿಸಿದರು. 6-6, 7-7, 13-13,17-17, 19-19,20-20 ಅಂಕಗಳೊಂದಿಗೆ ರೋಮಾಂಚನಕಾರಿಯಾಗಿ ಸಾಗಿದ ಮ್ಯಾರಥಾನ್ ಸೆಟ್ ಪ್ರೇಕ್ಷಕರಿಗೆ ಸ್ಮರನೀಯ ಅನುಭವ ನೀಡಿತ್ತು.  ಅಂತಿಮವಾಗಿ 25-22 ಅಂಕಗಳ ಅಂತರದಲ್ಲಿ ಕರ್ನಾಟಕ ಸೆಟ್ ಗೆದ್ದುಕೊಂಡಿತು. 2-2 ಸೆಟ್ ಗಳೊಂದಿಗೆ ಸಮಬಲ ಸಾಧಿಸಿದ್ದ ಪಂದ್ಯದ ನಿರ್ಣಾಯಕ 5ನೇ ಸೆಟ್ ನಲ್ಲಿ ಬಿಪಿಸಿಎಲ್ ಆಟಗಾರರು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಜಿದ್ದಾಜಿದ್ದಿನ ಹೋರಾಟದ ನಡುವೆ 15-12 ಅಂತರದಲ್ಲಿ ಬಿಪಿಸಿಎಲ್ ಸೆಟ್ ಮತ್ತು ಪಂದ್ಯ ಗೆದ್ದು ಸಂಭ್ರಮಿಸಿತು.

ಮಹಿಳೆಯರ ವಿಭಾಗ: ಕೇರಳ ಪೊಲೀಸ್ ತಂಡ ಚಾಂಪಿಯನ್

ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲಿ ಚೆನ್ನೈನ ಎಸ್ಆರ್ ಎಂ ತಂಡವನ್ನು 25-21, 25-18, 25-16 ಅಂತರದಲ್ಲಿ ನೇರ ಸೆಟ್ ಗಳ ಅಂತರದಲ್ಲಿ ಮಣಿಸಿದ ಕೇರಳ ಪೊಲೀಸ್ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

Join Whatsapp
Exit mobile version