ಯುವ ರಾಷ್ಟ್ರೀಯ ಶೂಟರ್ ಕೋನಿಕಾ ಲಾಯಕ್ ಆತ್ಮಹತ್ಯೆ

Prasthutha|

ಸೋನು ಸೂದ್’ರಿಂದ ಜರ್ಮನ್ ರೈಫಲ್ ಪಡೆದಿದ್ದ ಕೋನಿಕಾ ಲಾಯಕ್

- Advertisement -

ಕೋಲ್ಕತ್ತಾ: ಬಾಲಿವುಡ್ ನಟ ಸೋನು ಸೂದ್‌ ಅವರಿಂದ ರೈಫಲ್ ಉಡುಗೊರೆಯಾಗಿ ಪಡೆದಿದ್ದ ಯುವ ಶೂಟರ್ ಕೋನಿಕಾ ಲಾಯಕ್, ಹೌರಾ ಜಿಲ್ಲೆಯ ಬಲ್ಲಿಯಲ್ಲಿರುವ ಶೂಟಿಂಗ್ ಅಕಾಡೆಮಿಯ ಹಾಸ್ಟೆಲ್’ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ಮಾರ್ಚ್’ನಲ್ಲಿ ನಟ, ಸಾಮಾಜಿಕ ಕಾರ್ಯಕರ್ತ ಸೋನು ಸೂದ್’ರಿಂದ ಜರ್ಮನ್ ರೈಫಲ್ ಪಡೆದಿದ್ದ ರಾಷ್ಟ್ರೀಯ ಶೂಟರ್ ಕೋನಿಕಾ ಲಾಯಕ್,  ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಮಾನಸಿಕ ಖಿನ್ನತೆಯಿಂದ ಸಾವಿಗೆ ಶರಣಾಗುತ್ತಿರುವುದಾಗಿ ಬರೆದಿದ್ದಾರೆ. 2022ರ ಫೆಬ್ರವರಿಯಲ್ಲಿ ಕೋನಿಕಾ ಲಾಯಕ್ ವಿವಾಹ ನಿಗದಿಯಾಗಿತ್ತು.

- Advertisement -

ಕೋಲ್ಕತ್ತಾದಲ್ಲಿ ಒಲಿಂಪಿಯನ್, ಅರ್ಜುನ ಪ್ರಶಸ್ತಿ ವಿಜೇತ ಜಾಯ್ ದೀಪ್ ಕರ್ಮಾಕರ್ ಅವರ ಬಳಿ ಕೋನಿಕಾ ತರಬೇತಿ ಪಡೆಯುತ್ತಿದ್ದರು. ಪ್ರಸಕ್ತ ಸಾಲಿನ ರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆಗೆ ಅರ್ಹತೆ ಪಡೆಯಲು ಅಲ್ಪ ಅಂತರದಲ್ಲಿ ಕೋನಿಕಾ ವಿಫಲರಾಗಿದ್ದರು. ಇದು ಆಕೆಯನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿತ್ತು. ಕಳೆದ 10 ದಿನಗಳಿಂದ ಕೋನಿಕಾ ಸರಿಯಾಗಿ ತರಬೇತಿಗೆ ಹಾಜರಾಗುತ್ತಿರಲಿಲ್ಲ. ವೈಯಕ್ತಿಕ ಸಮಸ್ಯೆಯಿಂದ ಬಳಲುತ್ತಿದ್ದವರಂತೆ ಕಂಡು ಬರುತ್ತಿದ್ದರು ಎಂದು  ತರಬೇತುದಾರ ಜಾಯ್ ದೀಪ್ ಪ್ರತಿಕ್ರಿಯಿಸಿದ್ದಾರೆ.

ಸೋನು ಸೂದ್’ರಿಂದ ರೈಫಲ್ ಪಡೆದಿದ್ದ ಕೋನಿಕಾ ಲಾಯಕ್

ಯುವ ರಾಷ್ಟ್ರೀಯ ಶೂಟರ್ ಕೋನಿಕಾ ಲಾಯಕ್, ಬೇರೆಯವರಿಂದ ಎರವಲು ಪಡೆದ ರೈಫಲ್’ನಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ, ಪ್ರತಿಭಾವಂತರಿಗೆ ನೆರವು ಬೇಕು ಎಂದು ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋ ನೋಡಿದ್ದ ಸೋನು ಸೂದ್ ಅವರು ಹೊಚ್ಚ ಹೊಸ ಮಾದರಿಯ ಜರ್ಮನಿ ನಿರ್ಮಿತ ರೈಫಲ್ ವೊಂದನ್ನು ಕೋನಿಕಾಗೆ ಉಡುಗೊರೆಯಾಗಿ ನೀಡಿದ್ದರು.

ಶೂಟಿಂಗ್ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದವರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಗಂಭೀರ ವಿಚಾರವಾಗಿದೆ. ಇದಕ್ಕೂ ಮೊದಲು ರಾಷ್ಟ್ರೀಯ ಆಯ್ಕೆ ಟ್ರಯಲ್ ನಲ್ಲಿ ಕಡಿಮೆ ಅಂಕ ಗಳಿಸಿದ ಕಾರಣಕ್ಕೆ ಪಿಸ್ತೂಲ್ ಶೂಟರ್ ಖುಷ್ ಸೀರತ್ ಕೌರ್ ಸಂಧು ಇತ್ತೀಚೆಗೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದರು. ರಾಜ್ಯ ಮಟ್ಟದ ಶೂಟರ್ ಹುನಾರ್ ದೀಪ್ ಸಿಂಗ್ ಸೋಹಲ್, ಮೊಹಾಲಿಯ ನಮನ್ ವೀರ್ ಸಿಂಗ್ ಬ್ರಾರ್ ಕೂಡಾ ಕ್ರೀಡೆಯಲ್ಲಿ ವೈಫಲ್ಯ ಹೊಂದಿದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದರು.

Join Whatsapp