ಸುರತ್ಕಲ್‌ ಟೋಲ್ ಗೇಟಿನ ಶುಲ್ಕವನ್ನು ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಸಂಗ್ರಹಿಸುವುದಾಗಿ ಸುತ್ತೋಲೆ ಹೊರಡಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ!

ಮಂಗಳೂರು: ಸುರತ್ಕಲ್‌ ಟೋಲ್ ಗೇಟಿನ ಶುಲ್ಕವನ್ನು ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಸಂಗ್ರಹಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುತ್ತೋಲೆ ಹೊರಡಿಸಿದೆ.

ಸುರತ್ಕಲ್ ಟೋಲ್‌ಗೇಟ್‌ನ್ನು ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನಗೊಳಿಸಿರುವುದರಿಂದ ಹೆಜಮಾಡಿ ಟೋಲ್‌ಗೇಟಿನ ಶುಲ್ಕವನ್ನು ಪರಿಷ್ಕರಿಸಿ ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುರುವಾರ ಸುತ್ತೋಲೆಯೊಂದನ್ನು ಹೊರಡಿಸಿದೆ.

- Advertisement -

“ಕರ್ನಾಟಕ ಸರ್ಕಾರದ ನಿರಂತರ ವಿನಂತಿ/ಬೇಡಿಕೆ ಮೇರೆಗೆ, ಸ್ಥಳೀಯ ಸಾರ್ವಜನಿಕ/ವಿಐಪಿ ಒತ್ತಾಯಗಳ ಆಧಾರದ ಮೇಲೆ, ಸಕ್ಷಮ ಪ್ರಾಧಿಕಾರವು ಹೊಸ ಮಂಗಳೂರು ಬಂದರು ರಸ್ತೆಯ ಸುರತ್ಕಲ್ ಟೋಲ್ ಪ್ಲಾಜಾ (NITK ಹತ್ತಿರ, NH-66 ರ ಕ್ಯಾಂಪಸ್) ವಿಲೀನಕ್ಕೆ ಅನುಮೋದನೆ ನೀಡಿದೆ.  ನವಯುಗ ಉಡುಪಿ ಟೋಲ್‌ವೇ ಪ್ರೈವೇಟ್ ಲಿಮಿಟೆಡ್‌ನ (ಟೋಲ್) ಯೋಜನೆಯ ಅಡಿಯಲ್ಲಿ ಬರುವ NH-66 ರ ಸುರತ್ಕಲ್‌ ಟೋಲ್ ಗೇಟಿನ ಶುಲ್ಕವನ್ನು ಹೆಜಮಾಡಿ ಟೋಲ್ ಪ್ಲಾಜಾದಿಂದ ಸಂಗ್ರಹಿಸಲಾಗುತ್ತದೆ” ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಸುರತ್ಕಲ್ ಟೋಲ್ ಗೇಟ್ ನಲ್ಲಿ ಒಂದು ಕಾರಿನ ಏಕಮುಖ ಪಾಸ್ ಗೆ 60 ರೂ. ಹಾಗೂ ಹೆಜಮಾಡಿ ಟೋಲ್ ಗೇಟ್ ನಲ್ಲಿ 40 ರೂ. ವಿಧಿಸಲಾಗುತ್ತಿತ್ತು. ಸುತ್ತೋಲೆಯ ಪ್ರಕಾರ ಹೆಜಮಾಡಿ ಟೋಲ್ ಗೇಟ್ ಏಕಮುಖ ಪಾಸ್‌ಗೆ ರೂ. 100 ಶುಲ್ಕ ವಿಧಿಸಲಿದೆ. ಅದೇ ರೀತಿ, ಬಸ್‌ಗಳು ಮತ್ತು ಟ್ರಕ್‌ಗಳಿಗೆ ಸುರತ್ಕಲ್ ಟೋಲ್ ಗೇಟ್ ನಲ್ಲಿ 210 ರೂ. ಹೆಜಮಾಡಿ ಟೋಲ್ ಗೇಟ್‌ನಲ್ಲಿ 145 ರೂ. ವಿಧಿಸಲಾಗುತ್ತಿತ್ತು. ಇನ್ನು ಮುಂದೆ ರೂ. 355 ವಿಧಿಸಲಿದೆ.

ಭಾರೀ ನಿರ್ಮಾಣ ಯಂತ್ರೋಪಕರಣಗಳು, ಬೃಹತ್ ಉಪಕರಣಗಳು ಮತ್ತು ಮಲ್ಟಿಆಕ್ಸಲ್ ವಾಹನಗಳಿಗೆ ರೂ. ಸುರತ್ಕಲ್ ಟೋಲ್ ನಲ್ಲಿ 325 ರೂ., ಹೆಜಮಾಡಿ ಟೋಲ್‌ನಲ್ಲಿ 225 ರೂ. ವಿಧಿಸಲಾಗುತ್ತಿತ್ತು.  ಇನ್ನು ಮುಂದೆ ಹೆಜಮಾಡಿ ಟೋಲ್ ಗೇಟ್ ನಲ್ಲಿ 550 ರೂ. ವಿಧಿಸಲಾಗುವುದು.

ಲಘು ವಾಣಿಜ್ಯ ಮತ್ತು ಲಘು ಸರಕು ವಾಹನಗಳಿಗೆ ಸುರತ್ಕಲ್ ಟೋಲ್ ನಲ್ಲಿ 100 ರೂ. ಹೆಜಮಾಡಿ ಟೋಲ್‌ನಲ್ಲಿ 70 ರೂ. ವಿಧಿಸಲಾಗುತ್ತಿತ್ತು. ಪರಿಷ್ಕಾರದ ಬಳಿಕ ಹೆಜಮಾಡಿ ಟೋಲ್ ಗೇಟ್ ನಲ್ಲಿ 170 ರೂ ವಿಧಿಸಲಾಗುವುದು ಎಂದು ಸುತ್ತೋಲೆ ಹೇಳಿದೆ.