ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ 752 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಮುಟ್ಟುಗೋಲು ಹಾಕಿಕೊಂಡ ಆಸ್ತಿಯಲ್ಲಿ ದೆಹಲಿ ಮತ್ತು ಮುಂಬೈನ ನ್ಯಾಷನಲ್ ಹೆರಾಲ್ಡ್ ಹೌಸ್ ಮತ್ತು ಲಕ್ನೋದ ನೆಹರೂ ಭವನ ಸೇರಿದ್ದು, ಅಸೋಸಿಯೇಟೆಡ್ ಜರ್ನಲ್ಸ್‌ಗೆ ಸೇರಿದ ಆಸ್ತಿಗಳ ಒಟ್ಟು ಮೌಲ್ಯ 752ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಸೋನಿಯಾ, ರಾಹುಲ್ ಗಾಂಧಿಯನ್ನು ಪ್ರಶ್ನಿಸಲಾಗಿದೆ.
ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಪತ್ರಿಕೆಯನ್ನು ನಡೆಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ವಂಚನೆ, ಪಿತೂರಿ ಮತ್ತು ಕ್ರಿಮಿನಲ್ ನಂಬಿಕೆ ಉಲ್ಲಂಘನೆಯ ಆರೋಪಗಳನ್ನು ಈ ಪ್ರಕರಣ ಒಳಗೊಂಡಿದೆ.
ರಾಜಕೀಯ ದುರುದ್ದೇಶಕ್ಕಾಗಿ ಕೇಂದ್ರವು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.