ಹೊಸನಗರ: ನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಪದವಿ ಪೂರ್ವ ಕಾಲೇಜು ಹಾಗೂ ಶ್ರೀರಾಮಕೃಷ್ಣ ವಿದ್ಯಾಲಯಗಳಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ರಾಷ್ಟ್ರ ಧ್ವಜ ವಿತರಿಸುವ ಕಾರ್ಯಕ್ರಮವನ್ನು ಶಾಸಕ ಹರತಾಳು ಹಾಲಪ್ಪ ಉದ್ಘಾಟಿಸಿದರು.
ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ದಿನಾಚರಣೆಯನ್ನು ಮನೆಮಂದಿಯೆಲ್ಲ ಸೇರಿ ಹಬ್ಬದ ರೀತಿ ವಿಜೃಂಭಣೆಯಿಂದ ಆಚರಿಸಬೇಕು. ಜಾತಿ-ಪಕ್ಷಬೇಧ ಮರೆತು ಪ್ರತಿಯೊಬ್ಬರೂ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವ ಮೂಲಕ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು. ಈಗ ಅಮೃತ ಮಹೋತ್ಸವ, ಭವಿಷ್ಯದಲ್ಲಿ ಶತಮಾನೋತ್ಸವ ಸಮಾರಂಭಕ್ಕೆ ಸಜ್ಜಾಗಬೇಕು ಎಂದು ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.
ಎಲ್ಲರ ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜ ರಾರಾಜಿಸಬೇಕು. ಮೂರು ದಿನ ಎಲ್ಲೇ ದೃಷ್ಟಿ ಹಾಯಿಸಿದರೂ ನಮ್ಮ ರಾಷ್ಟ್ರ ಧ್ವಜ ಎದ್ದು ಕಾಣಬೇಕು. ಈ ಧ್ವಜಗಳಿಗಿಂತ ಮೇಲೆ ಬೇರೆ ಯಾವುದೇ ಧ್ವಜ ಹಾರಾಡಬಾರದು ಎಂದು ಹೇಳಿದರು.
ರಾಷ್ಟ್ರಧ್ವಜ ಆಟಿಕೆ ವಸ್ತುವಲ್ಲ. ಬಣ್ಣದ ಬಟ್ಟೆಯಲ್ಲ ಭಾವೈಕ್ಯತೆ ಸಾರ್ವಭೌಮತ್ವದ ಸಂದೇಶ ಸಾರುವ ಸಂಕೇತವಾಗಿದೆ. ಎಲ್ಲರು ಅದಕ್ಕೆ ಗೌರವ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತ 77,500 ಧ್ವಜಗಳನ್ನು ವಿತರಣೆ ಮಾಡಲಾಗಿದೆ ಎಂದರು.