Home ಕ್ರೀಡೆ ಏಷ್ಯಾ ಕಪ್‌| ಹೀರೋ ಆದ ನಸೀಮ್‌ ಶಾ, ಫೈನಲ್‌ಗೆ ಪಾಕಿಸ್ತಾನ

ಏಷ್ಯಾ ಕಪ್‌| ಹೀರೋ ಆದ ನಸೀಮ್‌ ಶಾ, ಫೈನಲ್‌ಗೆ ಪಾಕಿಸ್ತಾನ

​​​​​​​ದುಬೈ: ಅಂತಿಮ ಓವರ್‌ವರೆಗೂ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ, ಏಷ್ಯಾ ಕಪ್‌ ಟೂರ್ನಿಯ ಸೂಪರ್-4 ಹಂತದ 4ನೇ ಪಂದ್ಯದಲ್ಲಿ ಪಾಕಿಸ್ತಾನ ರೋಚಕ ಗೆಲುವು ಸಾಧಿಸಿದೆ. 130 ರನ್‌ಗಳ ಸಾಮಾನ್ಯ ಮೊತ್ತವನ್ನು ನಿಯಂತ್ರಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ ಅಫ್ಘಾನಿಸ್ತಾನ ತಂಡಕ್ಕೆ ಪಾಕಿಸ್ತಾನದ ಬೌಲರ್‌ ನಸೀಮ್‌ ಶಾ ತಡೆಗೋಡೆಯಾದರು.

19 ಓವರ್‌ ಕಳೆಯುವಷ್ಟರಲ್ಲಿ 9 ವಿಕೆಟ್‌ ಕಳೆದುಕೊಂಡು ಗೆಲುವಿನಿಂದ 11 ರನ್‌ ದೂರದಲ್ಲಿದ್ದ ಪಾಕಿಸ್ತಾನಕ್ಕೆ, ಸೋಲು ಖಚಿತವೆಂದೇ ಭಾವಿಸಲಾಗಿತ್ತು. ಆದರೆ ಫಝಲುಲ್‌ ಹಖ್‌ ಫಾರೂಖಿ ಎಸೆದ ನಿರ್ಣಾಯಕ ಅಂತಿಮ ಓವರ್‌ನ ಮೊದಲ 2 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್‌ ಸಿಡಿಸಿದ 19 ವರ್ಷದ ನಸೀಮ್‌ ಶಾ, ತನ್ನ ತಂಡವನ್ನು ಫೈನಲ್‌ಗೆ ಕೊಂಡೊಯ್ದರು.

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ಮೊದಲು ಬ್ಯಾಟ್‌ ಮಾಡಿದ್ದ ಅಫ್ಘಾನಿಸ್ತಾನವನ್ನು ಪಾಕ್‌ ಬೌಲರ್‌ಗಳು 6 ವಿಕೆಟ್‌ ಪಡೆದು, 129 ರನ್‌ಗಳಿಗೆ ನಿಯಂತ್ರಿಸಿದ್ದರು. ಆದರೆ ಸುಲಭವಾಗಿ ಸೋಲೊಪ್ಪಿಕೊಳ್ಳಲು ಸಿದ್ಧರಾಗದ ಅಫ್ಘಾನ್‌, ಪಾಕ್‌ ಬ್ಯಾಟ್ಸ್‌ಮನ್‌ಗಳನ್ನು ಆರಂಭದಲ್ಲೇ ನಿಯಂತ್ರಿಸಿದ್ದರು. ಖಾತೆ ತೆರೆಯುವ ಮುನ್ನವೇ ಪಾಕ್‌ ನಾಯಕ ಬಾಬರ್‌ ಅಝಂ ವಿಕೆಟ್‌ ಪತನವಾಗಿತ್ತು. 18. 2ಓವರ್‌ಗಳಲ್ಲಿ 110 ರನ್‌ಗಳಿಸುವಷ್ಟರಲ್ಲಿ 8 ವಿಕೆಟ್‌ ಪತನವಾಗಿತ್ತು. ಈ ವೇಳೆ ಪಾಕಿಸ್ತಾನದ ಗೆಲುವಿಗೆ 10 ಎಸೆತಗಳಲ್ಲಿ 20 ರನ್‌ ಅಗತ್ಯವಿತ್ತು. ಹೀಗಾಗಿ ಪಂದ್ಯ ಅಫ್ಘಾನ್‌ ಗೆಲ್ಲಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಫರೀದ್‌ ಅಹ್ಮದ್‌ ಎಸೆದ 19ನೇ ಓವರ್‌ನಲ್ಲಿ ಆಸಿಫ್‌ ಅಲಿ ಸಿಕ್ಸರ್‌ ಬಾರಿಸಿದರು. ಆದರೆ ಮುಂದಿನ ಎಸೆತದಲ್ಲೇ  ಅಲಿ ಕ್ಯಾಚ್‌ ಕೊಟ್ಟು ನಿರ್ಗಮಿಸಿದರು. ಈ ವೇಳೆ ಅಲಿ ಮತ್ತು ಬೌಲರ್‌ ಫರೀದ್‌ ನಡುವೆ ತಳ್ಳಾಟ ನಡೆಯಿತಾದರೂ, ಅಂಪೈರ್‌ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸೂಪರ್-4 ಹಂತದ ತನ್ನ ಮೊದಲ ಪಂದ್ಯದಲ್ಲಿ ಭಾರತವನ್ನು 5 ವಿಕೆಟ್‌ಗಳ ಅಂತರದಲ್ಲಿ ಮಣಿಸಿದ್ದ ಪಾಕಿಸ್ತಾನ, 2ನೇ ಪಂದ್ಯದಲ್ಲಿ ಅಫ್ಘಾನಿಸ್ತಾವನ್ನುಸೋಲಿಸುವುದರೊಂದಿಗೆ ಫೈನಲ್‌ ಪ್ರವೇಶಿಸಿದೆ. ಮತ್ತೊಂದೆಡೆ ಪಾಕ್‌ ಗೆಲುವಿನೊಂದಿಗೆ ಭಾರತ, ಅಧಿಕೃತವಾಗಿ ಏಷ್ಯಾಕಪ್‌ನಿಂದ ಹೊರನಡೆದಿದೆ.  ಪ್ರಶಸ್ತಿ ಸುತ್ತಿನಲ್ಲಿ ಪಾಕ್‌-ಲಂಕಾ ಮುಖಾಮುಖಿಯಾಗಲಿದೆ.

Join Whatsapp
Exit mobile version