ಮೈಸೂರು: ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಬರಬೇಕಿದ್ದ ತೆರಿಗೆ ಪಾಲು ಕಡಿಮೆಯಾಗಿದೆ. ಇದು ಮೊದಲ ಅನ್ಯಾಯ. ಮೊದಲೆಲ್ಲ ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳಿಗೆ ಕೇಂದ್ರದ ಪಾಲು 75 – 80% ಹಾಗೂ ರಾಜ್ಯದ ಪಾಲು 25 – 20% ಇತ್ತು, ಆದರೆ ಈಗ ಏನಾಗಿದೆಯೆಂದರೆ ಕೇಂದ್ರ ಮತ್ತು ರಾಜ್ಯದ ಪಾಲನ್ನು 50 – 50% ಮಾಡಿದ್ದಾರೆ. ಇದರಿಂದ ಕೇಂದ್ರದ ಯೋಜನೆಗಳಿಗೆ ರಾಜ್ಯ ಹೆಚ್ಚುವರಿ ಹೊರೆ ಹೊರಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವರ್ಷದ ಜೂನ್ ತಿಂಗಳಿಗೆ ರಾಜ್ಯಗಳಿಗೆ ನೀಡುತ್ತಿದ್ದ ಜಿ.ಎಸ್.ಟಿ ಪರಿಹಾರ ನಿಂತು ಹೋಗುತ್ತದೆ, ಇದರಿಂದ ಕನಿಷ್ಠ 20,000 ಕೋಟಿ ರೂಪಾಯಿ ನಮ್ಮ ರಾಜ್ಯಕ್ಕೆ ನಷ್ಟವಾಗುತ್ತದೆ. ಹಾಗಾಗಿ ಈ ಪರಿಹಾರವನ್ನು ಇನ್ನೈದು ವರ್ಷ ಮುಂದುವರೆಸಿ ಎಂದು ನಾನು ಮನವಿ ಮಾಡಿದ್ದೆ, ಈ ಬಗ್ಗೆ ಬೇರೆ ಯಾರೂ ಮಾತನಾಡದ್ದರಿಂದ ಮೋದಿ ಅವರು ಸುಮ್ಮನಿದ್ದಾರೆ. ಬಿಜೆಪಿಯಿಂದ 25 ಜನ ಸಂಸದರನ್ನು ಜನ ಆರಿಸಿ ಕಳಿಸಿದ್ದಾರೆ, ಇವರು ಯಾರಿಗೂ ನರೇಂದ್ರ ಮೋದಿ ಎದುರು ಮಾತನಾಡುವ ಧೈರ್ಯ ಇಲ್ಲ ಎಂದು ಕುಟುಕಿದರು.
ಮೋದಿ ಅವರು ಪ್ರಧಾನಿಯಾದ ಮೇಲೆ ಕೇಂದ್ರ ಸರ್ಕಾರದ ಸಾಲ ಮಿತಿಮೀರಿ ಹೋಗಿದೆ. ಸ್ವಾತಂತ್ರ್ಯ ಬಂದ ನಂತರದಿಂದ ಮನಮೋಹನ್ ಸಿಂಗ್ ಅವರ ಕೊನೆಯ ಅವಧಿಯ ವರೆಗೆ ಇದ್ದ ಒಟ್ಟು ಸಾಲ 53 ಲಕ್ಷ ಕೋಟಿ, ಈ ವರ್ಷದ ಮಾರ್ಚ್ ವೇಳೆಗೆ ದೇಶದ ಒಟ್ಟು ಸಾಲ 135 ಲಕ್ಷ ಕೋಟಿ, ಮುಂದಿನ ವರ್ಷ ಮತ್ತೆ 11 ಲಕ್ಷ ಕೋಟಿ ಸಾಲ ಮಾಡುವುದಾಗಿ ಕೇಂದ್ರ ಬಜೆಟ್ ನಲ್ಲಿ ತಿಳಿಸಿದ್ದಾರೆ. ಅಂದರೆ ಮೋದಿ ಅವರು ಪ್ರಧಾನಿಯಾಗಿ ಕೇವಲ ಎಂಟೇ ವರ್ಷದಲ್ಲಿ ಮಾಡಿರುವ ಒಟ್ಟು ಸಾಲ 94 ಲಕ್ಷ ಕೋಟಿ ರೂಪಾಯಿ. ಇದೇನಾ ಅಚ್ಚೇದಿನ್ ಎಂದರೆ? ಎಂದು ಪ್ರಶ್ನಿಸಿದರು.
ಮೋದಿ ಸರ್ಕಾರ ದೇಶವನ್ನು ದಿವಾಳಿಗೆ ತಂದು ನಿಲ್ಲಿಸಿದೆ. ಸಬ್ ಕ ಸಾಥ್ ಸಬ್ ಕ ವಿಕಾಸ್ ಅಲ್ಲ ಇದು, ಸಬ್ ಕ ವಿನಾಶ್ ಸರ್ಕಾರ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.