ಮಂಗಳೂರು: ಪಠ್ಯ ಪುಸ್ತಕದಲ್ಲಿ ಸಂತ, ಸಮಾಜ ಸುಧಾರಕ ನಾರಾಯಣ ಗುರುಗಳ ಪಠ್ಯಗಳನ್ನು ಕೈಬಿಟ್ಟು ಆರ್ ಎಸ್ ಎಸ್ ಸಂಸ್ಥಾಪಕ ಹೆಡಗೆವಾರ್ ಭಾಷಣ ಸೇರಿಸಿರುವುದು ಕ್ಷುದ್ರ ರಾಜಕೀಯ ಎಂದು ಮಾಜಿ ಶಾಸಕ ಜೆ. ಆರ್. ಲೋಬೋ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾರಾಯಣ ಗುರುಗಳು ಮೊದಲು ಕಾಲಿಟ್ಟುದು ಮಂಗಳೂರು ರೈಲು ನಿಲ್ದಾಣಕ್ಕೆ. ಆ ರೈಲು ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರು ಇಡುವಂತೆ ಒತ್ತಾಯಿಸಿದರೆ, ಕೇಂದ್ರ ಸರಕಾರ ಕಿವಿಗೇ ಹಾಕಿಕೊಂಡಿಲ್ಲ. ಮಂಗಳೂರು ವಿಮಾನ ನಿಲ್ದಾಣದ ವಿಷಯದಲ್ಲೂ ಹಾಗೇ ಮಾಡಿದರು ಎಂದು ಲೋಬೋ ಹೇಳಿದರು.
ಪ್ರಜಾಪ್ರಭುತ್ವ ಮೆರವಣಿಗೆಯಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಹೊರಗಿಟ್ಟಾಗ ಅದು ಆಕಸ್ಮಿಕ ಇರಬಹುದು ಎಂದು ಹೇಳಲಾಗಿತ್ತು. ಈಗ ನಾರಾಯಣ ಗುರುಗಳ ಪಾಠ ಕೈಬಿಟ್ಟಿರುವುದು ಇವರು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟ ಪಡಿಸಿದೆ. ಪ್ರತಿ ಹೆಜ್ಜೆಯಲ್ಲಿ ಅವಮಾನ ಮಾಡುವ ಬಿಜೆಪಿ ಸರಕಾರವು ಬಸವಣ್ಣ, ಪೆರಿಯಾರ್ ಅವರ ಹೆಸರನ್ನು ಸಹ ಕೈಬಿಟ್ಟಿರುವುದು ಖಂಡನೀಯ ಎಂದು ಲೋಬೋ ಹೇಳಿದರು.
ಶಿಕ್ಷಣ ಸಮಾಜ ತಿದ್ದಲು ಉಪಯುಕ್ತ. ಆದರೆ ಹಿಟ್ಲರ್ ಜರ್ಮನಿಯಲ್ಲಿ ಮಾಡಿದಂತೆ ಇಲ್ಲೂ ಶಿಕ್ಷಣದಲ್ಲಿ ಸಮಾಜ ಕೆಡಿಸುವ ಕೆಲಸಕ್ಕೆ ಕೈ ಹಾಕಿದೆ. ಬಿಜೆಪಿ ಸರಕಾರವು ಜಿಲ್ಲೆಯ ಬ್ಯಾಂಕುಗಳಿಗೂ ಅನ್ಯಾಯ ಮಾಡಿತು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಾಹುಲ್ ಹಮೀದ್, ಟಿ. ಕೆ. ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.