‘’ಸಂಸದರೇ ಅಕ್ಟೋಬರ್ ಮುಗಿಯಿತು, 2,000 ರೂಪಾಯಿಯ ಮರಳು ಎಲ್ಲಿ?’’

Prasthutha|

ಮಂಗಳೂರು : ಪಂಪ್ ವೆಲ್ ಫ್ಲೈ ಓವರ್ ಬಗ್ಗೆ ದಕ್ಷಿಣ ಕನ್ನಡ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ರೋಲ್ ಆದಷ್ಟು ಬಹುಶಃ ಯಾವ ರಾಜಕಾರಣಿಯೂ ಟ್ರೋಲ್ ಆಗಿರಲಿಕ್ಕಿಲ್ಲ. ಟ್ರೋಲ್ ಕಾಟ ತಾಳಲಾರದೆ, ಕೊನೆಗೂ ಪಂಪ್ ವೆಲ್ ಫ್ಲೈ ಓವರ್ ಹೇಗೋ ಪ್ರಯಾಣಕ್ಕೆ ಮುಕ್ತವಾಗಿದೆ. ಇದೀಗ ಟ್ರೋಲಿಗರಿಗೆ ಮತ್ತೊಂದು ಹೊಸ ವಿಷಯ ಸಿಕ್ಕಿದ್ದು, ಕಳೆದ ತಿಂಗಳು ಮರಳು ಬಗ್ಗೆ ಸಂಸದರು ನೀಡಿದ್ದ ಹೇಳಿಕೆ ಇದೀಗ ವ್ಯಾಪಕ ಟ್ರೋಲ್ ಗೆ ಕಾರಣವಾಗಿದೆ.

ಸೆ.17ರಂದು ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಾ, ಅಕ್ಟೋಬರ್ ಮುಗಿಯುವುದರೊಳಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ಲೋಡ್ ಗೆ 2,000 ರೂ.ಯಲ್ಲಿ ಮರಳು ಒದಗಿಸುವುದಾಗಿ ಹೇಳಿದ್ದರು. ಇದೀಗ ಇಂದು ಅ.31 ಆಗಿದ್ದು, ಇಲ್ಲಿ ವರೆಗೂ 2,000 ರೂ.ಯ ಮರಳು ಎಲ್ಲೂ ಬಂದಂತಿಲ್ಲ. ಇದನ್ನು ಮನಗಂಡು, ಇಂದಿನಿಂದಲೇ ಟ್ರೋಲಿಗರು ಸಂಸದರ ಕಾಲೆಳೆಯಲು ಆರಂಭಿಸಿದ್ದಾರೆ.

- Advertisement -

“ನೆನಪಿರಲಿ… ಇಂದು ಅಕ್ಟೋಬರ್ ತಿಂಗಳ ಕೊನೆಯ ದಿನ… 2000 ರೂ.ಗಳ ಮರಳು ಇಂದು ಸಂಜೆಯೊಳಗೆ ನಿಮ್ಮ ಮನೆ ಬಾಗಿಲಿಗೆ ಬರುತ್ತೆ’’ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಅಕ್ಟೋಬರ್ ಒಳಗೆ ಜೊತೆಗೆ 2,000 ರೂ.ಗೆ ಮರಳು ಒದಗಿಸುವುದಾಗಿ ಸಂಸದರು ಹೇಳಿದ್ದ ವೀಡಿಯೊ ತುಣುಕು ಕೂಡ ವೈರಲ್ ಆಗಿದೆ. ಈ ಹಿಂದೆ ಪಂಪ್ ವೆಲ್ ಫ್ಲೈ ಓವರ್ ಬಗ್ಗೆ ಸಂಸದರು ಟ್ರೋಲ್ ಗೊಳಗಾಗಿದ್ದರು. ಪಂಪ್ ವೆಲ್ ವೃತ್ತವನ್ನು ಕೆಡವಿ ಹಾಕಿ ಫ್ಲೈ ಓವರ್ ನಿರ್ಮಿಸುವ ಕಾಮಗಾರಿ ಆರಂಭವಾಗಿ ವರ್ಷಗಳೇ ಕಳೆದರೂ, ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಕಾಮಗಾರಿ ದಿನಾಂಕ ಪೂರ್ಣಗೊಳ್ಳುವ ಬಗ್ಗೆ ಸಂಸದರು ಹಲವು ಬಾರಿ ದಿನಾಂಕಗಳನ್ನು ನಿಗದಿಪಡಿಸಿದ್ದರೂ, ಆ ದಿನಾಂಕಗಳಂದು ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಇದು ಭಾರೀ ಟ್ರೋಲ್ ಗೊಳಗಾಗಿ, ಸುದ್ದಿಯೂ ಆಗಿತ್ತು.

https://youtu.be/B_Me5DH4wCk
- Advertisement -