ಮಂಗಳೂರು: ನಳಿನ್ ಕಟೀಲ್ ಅವರು ಚರಂಡಿ, ಕಾಲುವೆ ನೋಡಬೇಡಿ, ಹೊಡಿಬಡಿ ಅಂದರು. ಆವತ್ತು ನನ್ನ ರಾಜೀನಾಮೆ ಕೇಳಿದ್ದರು. ಮಾನ ಮರ್ಯಾದೆ ಇದ್ದರೆ ಅವರು ರಾಜೀನಾಮೆ ಕೊಡಲಿ. ಬಿಜೆಪಿ ಸೋಲಿಗೆ ನಳಿನ್ ಕುಮಾರ್ ಕಟೀಲ್ ಕಾರಣ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಮಂಗಳೂರಿಗೆ ಭೇಟಿ ನೀಡಿ ಮಾತನಾಡಿದ ಅವರು, ನಳಿನ್ ಕಟೀಲ್ ಹಿಂದುತ್ವ ಮತ್ತು ಭಾವನಾತ್ಮಕ ಅಂಶಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರು ಮಾಡಿದ ಅಭಿವೃದ್ಧಿ ತೋರಿಸಿ, ಮೋದಿ ಹೆಸರು ಬಿಟ್ಟು ಏನು ಮಾಡಿದ್ದಾರೆ? ಅವರು ಪ್ರಗತಿ ತೋರಿಸಿ ಅಧಿಕಾರಕ್ಕೆ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಂಗಾರಪ್ಪ ಕೊಟ್ಟ ಭಿಕ್ಷೆಯಲ್ಲಿ ನಳಿನ್ ಕಟೀಲ್ ಅಧಿಕಾರ ನೋಡಿದ್ದು. ಯತ್ನಾಳ್ ಹೇಳಿದ್ರಲ್ಲ ಸಾವಲ್ಲಿ ರಾಜಕೀಯ ಅಂತ, ಬಂಗಾರಪ್ಪ ಹೆಸರಿನಲ್ಲಿ ನಳಿನ್ ಇಲ್ಲಿ ಸಂಸದರಾಗಿದ್ದು. ಪ್ರವೀಣ್ ನೆಟ್ಟಾರು ಹತ್ಯೆ ವೇಳೆ ಧಿಕ್ಕಾರ ಕೂಗಿದ್ದು ಕಾಂಗ್ರೆಸ್ ನವರಲ್ಲ. ಬಿಜೆಪಿ, ಭಜರಂಗದಳ ಮತ್ತು ವಿಎಚ್ಪಿ ಕಾರ್ಯಕರ್ತರೇ ಅವರ ಕಾರು ಅಲುಗಾಡಿಸಿದ್ದು. ಬಿಜೆಪಿ ನಳಿನ್ ಕಟೀಲ್ಗೆ ಟಿಕೆಟ್ ಕೊಡಬೇಕು, ಆಗ ಇಲ್ಲಿಗೆ ನಾನೇ ಬರ್ತೇನೆ. ಅವರಿಗೆ ಚುನಾವಣೆಯಲ್ಲಿ ಏನು ಮಾಡಬೇಕೋ ನಾನು ಇಲ್ಲಿ ಮಾಡುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದರು.