Home ಟಾಪ್ ಸುದ್ದಿಗಳು ಮುಂದಿನ ವರ್ಷ ಪಂಪ್ ವೆಲ್ ನಲ್ಲಿ ಹೊಸ ಬಸ್ ನಿಲ್ದಾಣದ ಕಾಮಗಾರಿ ಆರಂಭ: ನಳೀನ್ ಕುಮಾರ್...

ಮುಂದಿನ ವರ್ಷ ಪಂಪ್ ವೆಲ್ ನಲ್ಲಿ ಹೊಸ ಬಸ್ ನಿಲ್ದಾಣದ ಕಾಮಗಾರಿ ಆರಂಭ: ನಳೀನ್ ಕುಮಾರ್ ಕಟೀಲ್

ಮಂಗಳೂರು: ಸ್ಮಾರ್ಟ್ ಸಿಟಿ ಲಿಮಿಟೆಡ್ ಯೋಜನೆಯಡಿ ಮಂಗಳೂರು ನಗರದಲ್ಲಿ ಅಭಿವೃದ್ಧಿ ಪರ್ವವೇ ಆರಂಭಗೊಂಡಿದ್ದು, ಮುಂದಿನ ವರ್ಷದಲ್ಲಿ ಪಂಪ್ ವೆಲ್ನಲ್ಲಿ ಬಹುದೊಡ್ಡ ಬಸ್ ನಿಲ್ದಾಣದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರು ತಿಳಿಸಿದರು.


ಅವರು ನ.2ರ ಮಂಗಳವಾರ ಮಂಗಳೂರು ನಗರದ ಉರ್ವ ಮಾರುಕಟ್ಟೆ ಬಳಿ 20.54 ಕೋಟಿ ರೂ.ಗಳಡಿ ಉದ್ದೇಶಿತ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ಗಳನ್ನೊಳಗೊಂಡ ಒಳಾಂಗಣ ಕ್ರೀಡಾಂಗಣ ಹಾಗೂ 70 ಕೋಟಿ ರೂ.ಗಳ ವೆಚ್ಚದಲ್ಲಿ ಹಂಪನಕಟ್ಟೆ ಹಳೆ ಬಸ್ ನಿಲ್ದಾಣದ ಬಳಿ ಪಿಪಿಪಿ ಮಾದರಿಯಡಿ ಉದ್ದೇಶಿತ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ನಿರ್ಮಾಣ ಕಾಮಗಾರಿಗಳಿಗೆ ರಂಗರಾವ್ ಪುರಭವನದಲ್ಲಿ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.


ಮುಂದಿನ ವರ್ಷ ಮಂಗಳೂರಿನ ಪಂಪ್ವೆಲ್ ನಲ್ಲಿ ಅತಿ ದೊಡ್ಡ ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿ ಕೈಗೊಳ್ಳಲಾಗುವುದು, ಆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದ್ದು, ಅಂಕಿತವಾಗಿದೆ, ಮಾರುಕಟ್ಟೆ ಸ್ಥಳಾಂತರ ಕುರಿತಂತೆ ನ್ಯಾಯಾಲಯದಲ್ಲಿ ದಾಖಲಾಗಿದ್ದು, ಸಮಸ್ಯೆ ಇರ್ತಥ್ಯವಾದ ನಂತರ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಮಂಗಳೂರು ಸ್ಮಾಟ್ ಸಿಟಿ ಕಾಮಗಾರಿಗಳನ್ನು ಎರಡನೇ ಹಂತದಲ್ಲಿ ಕೈಗೊಳ್ಳಲಾಯಿತು. ಆದರೂ ಕಾಮಗಾರಿಗಳಲ್ಲಿ ಮಂಗಳೂರು ನಂಬರ್ ಒನ್ ಆಗಿ ಹೊರಹೊಮ್ಮಿದೆ, ಅದಕ್ಕೆ ಪ್ರಮುಖ ಕಾರಣ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಶಾಸಕರ ಉತ್ಸಾಹ ಹಾಗೂ ಪ್ರೋತ್ಸಾಹ. ಮಂಗಳೂರು ಮೇಯರ್ ಕೂಡ ಸ್ಮಾಟ್ ಸಿಟಿಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ, ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಕೇಂದ್ರದಿಂದ ಐದು ನೂರು ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.


ಮಂಗಳೂರನ್ನು ಅಭಿವೃದ್ಧಿಶೀಲ ಹಾಗೂ ಮಾದರಿ ನಗರವನ್ನಾಗಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಅವುಗಳಲ್ಲಿ ಉತ್ತಮ ದರ್ಜೆಯ ಕಾಂಕ್ರಿಟ್ ರಸ್ತೆಗಳ ನಿರ್ಮಾಣ, ಕಾರ್ಕ್ ಟವರ್ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ಪೂರ್ಣಗೊಂಡಿದ್ದು, ಸಾರ್ವಜನಿಕರ ಸೇವೆಗೆ ಅರ್ಪಣೆಯಾಗಿವೆ, ಇನ್ನು ಹಲವಾರು ಪ್ರಗತಿಯಲ್ಲಿವೆ, ಮಂಗಳೂರನ್ನು ಸಂಪೂರ್ಣ ಅಭಿವೃದ್ಧಿಪಡಿಸಲು ಸಾರ್ವಜನಿಕರ ಸಹಕಾರ ಅತಿ ಅಗತ್ಯ ಅವರು ಕೈಜೋಡಿಸುವಂತೆ ಕರೆ ನೀಡಿದರು.
ಸ್ಮಾಟ್ ಸಿಟಿಯ ಕಾಮಗಾರಿಗಳನ್ನು ಕೈಗೊಳ್ಳಲು ಯಡಿಯೂರಪ್ಪ ನೇತೃತ್ವದ ಸರಕಾರದ ಮೊದಲ ಹಂತದಲ್ಲಿ ಮೂರು ನೂರು ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿತ್ತು, ಅದರಲ್ಲಿ ಗುಣಮಟ್ಟದ ಕಾಂಕ್ರಿಟ್ ರಸ್ತೆಗಳು ಸೇರಿದಂತೆ, ಇತರೆ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು, ಹಿಂದಿಗಿಂತಲೂ ಇದೀಗ ಮಂಗಳೂರಿನಲ್ಲಿ ಸುಂದರ ರಸ್ತೆಗಳು ನಿರ್ಮಾಣವಾಗಿವೆ, ಸ್ಮಾರ್ಟ್ ಸಿಟಿಯೊಂದಿಗೆ ಅಮೃತ್ ಯೋಜನೆಯಡಿ 180 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ, ಆ ಯೋಜನೆಯಡಿ ಮೂಲಭೂತ ಸೌಕರ್ಯ ಹಾಗೂ ಯುಜಿಡಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.


ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಕೈಗೊಳ್ಳುವ ವೇಳೆ ರಸ್ತೆ ಅಗಲೀಕರಣ ಸೇರಿದಂತೆ ಸ್ಥಳ ತೆರವುಗೊಳಿಸುವುದು ಸೇರಿದಂತೆ ಕೆಲವು ಸಮಸ್ಯೆಗಳು ಎದುರಾಗಿದ್ದವು, ಶಾಸಕರು ಶ್ರಮವಹಿಸಿ ಅದನ್ನು ಬಗೆಹರಿಸಿದ್ದಾರೆ, ನಗರದಲ್ಲಿ ಕಬ್ಬಡಿ ಹಾಗೂ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ, ಕ್ರೀಡಾಂಗಣ ನಿರ್ಮಾಣವಾದಲ್ಲಿ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದರು.


ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿದರು.
ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಕಿಯೋನಿಕ್ಸ್ನ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರು, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಸ್ಮಾಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ ಹಾಗೂ ಇತರರು ಉಪಸ್ಥಿತರಿದ್ದರು.

Join Whatsapp
Exit mobile version