Home ಟಾಪ್ ಸುದ್ದಿಗಳು ನಾಗಾಲ್ಯಾಂಡ್ ಹಿಂಸಾಚಾರ: ಅಮಿತ್ ಶಾ, AFSPA ಕಾಯ್ದೆಯ ವಿರುದ್ಧ ಪ್ರತಿಭಟನೆ

ನಾಗಾಲ್ಯಾಂಡ್ ಹಿಂಸಾಚಾರ: ಅಮಿತ್ ಶಾ, AFSPA ಕಾಯ್ದೆಯ ವಿರುದ್ಧ ಪ್ರತಿಭಟನೆ

ಕೊಹಿಮಾ: ಇತ್ತೀಚೆಗೆ ನಾಗಾಲ್ಯಾಂಡ್ ನಲ್ಲಿ ಸೇನೆ ನಡೆಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಂಸತ್ ನಲ್ಲಿ ಸುಳ್ಳು ಹೇಳಿಕೆ ನೀಡಿದ್ದ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚಿಸಬೇಕು ಮತ್ತು ವಿವಾದಿತ AFSPA ಕಾಯ್ದೆಯನ್ನು ತಕ್ಷಣದಿಂದ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಶನಿವಾರ ನಾಗಾಲ್ಯಾಂಡ್ ನ ಸೋಮ ಎಂಬಲ್ಲಿ ನಾಗರಿಕರು ಪ್ರತಿಭಟನೆ ನಡೆಸಿದರು.

ಕಳೆದ ವಾರ ಸೋಮ ಜಿಲ್ಲೆಯಲ್ಲಿ ಸೇನೆ ನಡೆಸಿದ ಹಿಂಸಾಚಾರದಲ್ಲಿ ಓರ್ವ ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು ಹದಿನಾಲ್ಕು ಮಂದಿ ಸಾವನ್ನಪ್ಪಿದ್ದರು. ಈ ವೇಳೆ ಪ್ರತಿಭಟನಕಾರರು ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಮಾತ್ರವಲ್ಲ ವಿವಾದಿತ AFSPA ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಂಸತ್ ನಲ್ಲಿ ಸುಳ್ಳು ಮಾಹಿತಿ ನೀಡಿದ ಅಮಿತ್ ಶಾ, ತನ್ನ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕೆಂದು ನಾಗರಿಕ ಒಕ್ಕೂಟದ ಉಪಾಧ್ಯಕ್ಷ ಹೊನಾಂಗ್ ಕೊನ್ಯಾಕ್ ಸರ್ಕಾರವನ್ನು ಒತ್ತಾಯಿಸಿದರು. ನಾಗಾಲ್ಯಾಂಡ್ ಹಿಂಸಾಚಾರಕ್ಕೆ ಬಲಿಯಾದವರ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ತಿಳಿಸಿದರು.

ನಾಗಾಲ್ಯಾಂಡ್ ನಲ್ಲಿ ಸೇನೆ ನಡೆಸಿದ ಹಿಂಸಾಚಾರವನ್ನು ಹಲವು ರಾಜಕೀಯ ಪಕ್ಷ, ಸಾಮಾಜಿಕ ಸಂಘಟನೆಗಳು ಕಟು ಶಬ್ದಗಳಿಂದ ಖಂಡಿಸಿದೆ ಮತ್ತು ಉನ್ನತ ಮಟ್ಟದ ತನಿಖೆಗೆ ಸರ್ಕಾರವನ್ನು ಒತ್ತಾಯಿಸಿದೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version