ಲಿಮಾ: ದಕ್ಷಿಣ ಅಮೆರಿಕಾದ ಪೆರುವಿನಲ್ಲಿ ನಿಗೂಢ ಮಮ್ಮಿಯೊಂದು ಪತ್ತೆಯಾಗಿದೆ.
ಅಲ್ಲಿನ ಪುರಾತನ ಸಮಾಧಿಯನ್ನು ಅಗೆದ ಪರಿಶೋಧಕರಿಗೆ ಮುಖವನ್ನು ಕೈಗಳಿಂದ ಮುಚ್ಚಿ ದೇಹವನ್ನು ಹಗ್ಗಗಳಿಂದ ಸುತ್ತಿರುವ ಮಮ್ಮಿ ಪತ್ತೆಯಾಗಿದೆ.
ಪೆರುವಿನ ರಾಜಧಾನಿ ಲಿಮಾದಿಂದ 32 ಕಿಮೀ ದೂರದಲ್ಲಿರುವ ಖಾಜ್’ಮಾರ್ಕ್ವಿಲಾ ಎಂಬ ಪ್ರಾಚೀನ ಸ್ಥಳದಲ್ಲಿ ಉತ್ಖನನ ನಡೆಸಿದ ಸಂಶೋಧಕರಿಗೆ ಈ ವಿಚಿತ್ರ ಮಮ್ಮಿ ದೊರೆತಿದೆ. ಈ ಮಮ್ಮಿಯು 800 ವರ್ಷಗಳಷ್ಟು ಹಳೆಯದಾಗಿದ್ದು, ಪೆರುವಿನಲ್ಲಿ ಇಂಕಾ ಕಾಲದಿಂದಲೂ ಪೂರ್ವ ಸಂಸ್ಕೃತಿಯಲ್ಲಿ ವಾಸಿಸುತ್ತಿದ್ದ ಸಮಾಜಕ್ಕೆ ಸೇರಿದ್ದಾಗಿದೆ ಎಂದು ವಿಜ್ಞಾನಿಗಳು ಪ್ರಾಥಮಿಕ ಅಧ್ಯಯನದ ನಂತರ ತಿಳಿಸಿದ್ದಾರೆ.
ಮಮ್ಮಿಯು ಗಂಡೋ ಅಥವಾ ಹೆಣ್ಣೋ ಎಂದು ನಿರ್ಧರಿಸಲು ವಿಜ್ಞಾನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ.
ಕ್ರಿ.ಶ. 400ರ ಸುಮಾರಿಗೆ ಖಾಜ್’ಮಾರ್ಕ್ವಿಲಾದಲ್ಲಿ ಮೊದಲು ಮಾನವ ವಾಸ ಆರಂಭವಾಯಿತು ಎಂದು ನಂಬಲಾಗಿದೆ. ಮೊದಲು ಪ್ರಾಚೀನ ಹುವಾರಿ ಸಮುದಾಯ, ನಂತರ ಇಕ್ಮಾ ಮತ್ತು ಇಂಕಾ ಸಮುದಾಯ ಕೂಡ ಈ ಸ್ಥಳವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿತ್ತು. ಮಣ್ಣಿನಿಂದ ನಿರ್ಮಿಸಿದ ಮನೆಗಳು ಮತ್ತು ಪಿರಮಿಡ್ ಗಳನ್ನು ಇಲ್ಲಿ ಉತ್ಖನನ ಮಾಡಲಾಗಿದೆ.
ಈ ಮನೆಗಳನ್ನು ಹಿಂದೆ ಹುವಾರಿ ಸಮುದಾಯದ ಯೋಧರಿಗಾಗಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಸರಕಾರ ಹಾಗೂ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಇತಿಹಾಸದಿಂದ ಮರೆಯಾಗಿರುವ ಖಾಜ್’ಮಾರ್ಕ್ವಿಲಾ ವಿನಾಶದ ಅಂಚಿನಲ್ಲಿದೆ.