Home ಟಾಪ್ ಸುದ್ದಿಗಳು ಮೈಸೂರು ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಬೇಕು: ಸಿದ್ದರಾಮಯ್ಯ

ಮೈಸೂರು ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಬೇಕು: ಸಿದ್ದರಾಮಯ್ಯ

ಮೈಸೂರು: ಮೈಸೂರು ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸುವಂತೆ ಆಗ್ರಹಿಸಿ ರೈತರ ಹಿತ ರಕ್ಷಣಾ ಸಮಿತಿ ಮಂಡ್ಯದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿರುವ 65 ಸಕ್ಕರೆ ಕಾರ್ಖಾನೆಗಳ ಪೈಕಿ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆ ಎಂದರೆ ಮೈಶುಗರ್ ಕಾರ್ಖಾನೆ. ಹಾಗಾಗಿ ಈ ಕಾರ್ಖಾನೆಯನ್ನು ಖಾಸಗೀಕರಣಗೊಳಿಸದೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪನೆಯಾದ ಮೈಶುಗರ್ ಸಕ್ಕರೆ ಕಾರ್ಖಾನೆ ಹಲವು ವರ್ಷಗಳ ಕಾಲ ಲಾಭದಲ್ಲೇ ಇತ್ತು, ನಂತರದಲ್ಲಿ ಕಾರಣಾಂತರಗಳಿಂದ ನಷ್ಟದ ಸುಳಿಗೆ ಸಿಲುಕಿತು. ಆದರೆ ಈ ನಷ್ಟಕ್ಕೆ ರೈತರು ಹೊಣೆಯಲ್ಲ, ಸರ್ಕಾರ ಹೊಣೆ. ಸದ್ಯ ಸರ್ಕಾರಿ ಸ್ವಾಮ್ಯದ ಹಲವು ಕಾರ್ಖಾನೆಗಳು, ಸಂಸ್ಥೆಗಳು ನಷ್ಟದಲ್ಲಿವೆ. ಹಾಗೆಂದ ಮಾತ್ರಕ್ಕೆ ಎಲ್ಲವನ್ನು ಮಾರಾಟ ಮಾಡೋದ? ನಷ್ಟಕ್ಕೆ ಕಾರಣಗಳೇನು ಎಂಬುದನ್ನು ಪತ್ತೆಹಚ್ಚಿ, ಅವುಗಳನ್ನು ಪುನರುಜ್ಜೀವನಗೊಳಿಸುವ ಕೆಲಸ ಸರ್ಕಾರ ಮಾಡಬೇಕು ಎಂದರು.

ಅನ್ನದಾನಿ ಅವರು ಶೂನ್ಯವೇಳೆಯಲ್ಲಿ ಮೈಶುಗರ್ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಸರ್ಕಾರದ ಬಳಿ ಉತ್ತರ ಕೇಳಿದ್ದರು. ಆಗ ನಾನು ಮಧ್ಯಪ್ರವೇಶಿಸಿ ಇದು ಅತ್ಯಂತ ಪ್ರಮುಖ ವಿಚಾರವಾದ್ದರಿಂದ ಕನಿಷ್ಟ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಭಾಧ್ಯಕ್ಷರಲ್ಲಿ ಒತ್ತಾಯ ಮಾಡಿದ್ದೆ. ನನ್ನ ಒತ್ತಾಯಕ್ಕೆ ಮಣಿದು ಸಭಾಧ್ಯಕ್ಷರು ಸದನದಲ್ಲಿ ಚರ್ಚೆಗೆ ಅವಕಾಶ ನೀಡಿದ್ದರು. ನಾನು ಕೂಡ ಹಲವು ಅಂಶಗಳನ್ನು ಸರ್ಕಾರದ ಗಮನಕ್ಕೆ ತಂದು ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳುವಂತೆ ಒತ್ತಾಯಿಸಿದೆ. ಮೊದಲಿಗೆ ಸರ್ಕಾರ ನೇಮಿಸುತ್ತಿರುವ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಕಾರ್ಖಾನೆಯ ಬಗ್ಗೆ ಆಸಕ್ತಿ ಇಲ್ಲ. ಹೀಗಾದಾಗ ಕಾರ್ಖಾನೆ ಲಾಭದ ಹಾದಿಗೆ ಮರಳುವುದಾದರೂ ಹೇಗೆ? ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಕಾರ್ಖಾನೆ ಉಳಿಯಬೇಕು ಎಂಬ ಉದ್ದೇಶದಿಂದ ರೂ. 145 ಕೋಟಿ ಅನುದಾನ ನೀಡಿದ್ದೆ.

ಕಾರ್ಖಾನೆಗೆ ಸಂಬಂಧಿಸಿದ ಆಸ್ತಿ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ಇದೆ. ರವೀಂದ್ರ ಕಲಾಕ್ಷೇತ್ರದ ಎದುರು ಭಾಗದಲ್ಲಿ ಕಾರ್ಖಾನೆಗೆ ಸೇರಿದ ಭೂಮಿ ಇದೆ. ಈ ಭೂಮಿಯನ್ನು ಅಭಿವೃದ್ಧಿಪಡಿಸಿ, ಅದರಿಂದ ಬರುವ ಆದಾಯವನ್ನು ಕಾರ್ಖಾನೆಗೆ ಬಳಕೆ ಮಾಡಿಕೊಳ್ಳಬಹುದು. ಮೈಸೂರು, ಮಂಡ್ಯದ ಖಾಸಗಿ ಸಕ್ಕರೆ ಕಾರ್ಖಾನೆಗಳು ಲಾಭಗಳಿಸುತ್ತವೆ, ಆದರೆ ಸರ್ಕಾರಿ ಕಾರ್ಖಾನೆಗೆ ಏಕೆ ಲಾಭ ಗಳಿಸಲು ಸಾಧ್ಯವಿಲ್ಲ? ಸರ್ಕಾರಕ್ಕೆ ಈ ಬದ್ಧತೆ ಇರಬೇಕಲ್ಲವೇ? ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವರು ಮಂಡ್ಯ ಜಿಲ್ಲೆಯವರು, ಅವರು ಈ ಕಾರ್ಖಾನೆಯನ್ನು ಅಭಿವೃದ್ಧಿ ಮಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರ ಕಾಲದಲ್ಲೇ ಖಾಸಗೀಕರಣಗೊಳಿಸುವ ಕೆಲಸ ಆರಂಭ ಮಾಡಿದರು.

ಮಂಡ್ಯದ ಜನರಿಗೆ ಮೈಶುಗರ್ ಸಕ್ಕರೆ ಕಾರ್ಖಾನೆಯೊಂದಿಗೆ ಭಾವನಾತ್ಮಕ ಸಂಬಂಧವಿದೆ. ರೈತ ಹಿತರಕ್ಷಣಾ ವೇದಿಕೆಯವರು ಮೈಸೂರಿನಲ್ಲಿ ಧರಣಿ ಮಾಡುತ್ತಿದ್ದಾರೆ, ಯಾವುದೇ ಕಾರಣಕ್ಕೂ ಸರ್ಕಾರ ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿದರು.

ನಮ್ಮ ಒತ್ತಡಕ್ಕೆ ಮಣಿದು ಸರ್ಕಾರ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ಕೈಬಿಟ್ಟಿದೆ. ಈಗ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ, ಶೀಘ್ರ ಕಾರ್ಯಾರಂಭಗೊಳಿಸುವಂತೆ ಮತ್ತೆ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬಳಿ ಕಾರ್ಖಾನೆಯ ಪುನಶ್ಚೇತನಕ್ಕೆ ಅಗತ್ಯವಿರುವ ಅನುದಾನ ನೀಡುವಂತೆ ಮಾತನಾಡುತ್ತೇನೆ. ಒಂದು ವೇಳೆ ಅವರು ಈ ಕೆಲಸ ಮಾಡದಿದ್ದರೆ ಮತ್ತೆ ನಾವು ಅಧಿಕಾರಕ್ಕೆ ಬಂದ ಒಂದು ತಿಂಗಳ ಒಳಗಾಗಿ ಕಾರ್ಖಾನೆಯನ್ನು ಆರಂಭ ಮಾಡುತ್ತೇವೆ. ರೈತ ಹಿತರಕ್ಷಣಾ ವೇದಿಕೆಯವರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಆದಷ್ಟು ಬೇಗ ಕಾರ್ಖಾನೆ ಕಾರ್ಯಾರಂಭಗೊಂಡು, ನಿಮ್ಮೆಲ್ಲರ ಹೋರಾಟ ಫಲನೀಡಲಿ ಎಂದು ಸಿದ್ದರಾಮಯ್ಯ ಹೇಳಿದರು

Join Whatsapp
Exit mobile version