Home ಟಾಪ್ ಸುದ್ದಿಗಳು ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ| ಬಾಲಾಪರಾಧಿ ಸೇರಿ 5 ಮಂದಿಯ ಬಂಧನ: ಡಿಜಿ ಐಜಿಪಿ ಪ್ರವೀಣ್...

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ| ಬಾಲಾಪರಾಧಿ ಸೇರಿ 5 ಮಂದಿಯ ಬಂಧನ: ಡಿಜಿ ಐಜಿಪಿ ಪ್ರವೀಣ್ ಸೂದ್

ಮೈಸೂರು: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿ & ಐಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಠಿ ನಡೆಸಿದ್ದು, ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದು, ಕಾರ್ಮಿಕರಾಗಿರುವ ಇವರು ತಮಿಳುನಾಡಿನ ಮೂಲದವರು ಎಂದು ಮಾಹಿತಿ ನೀಡಿದ್ದಾರೆ. ಕಳೆದ ಆ. 24ರಂದು ರಾತ್ರಿ ನಡೆದಿದ್ದ ಎಂಬಿಎ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪೈಶಾಚಿಕ ಕೃತ್ಯದ ಐವರು ಆರೋಪಿಗಳನ್ನು ಬಂಧಿಸಿದ್ದು ಅದರಲ್ಲಿ ಓರ್ವ ಅಪ್ರಾಪ್ತ ಬಾಲಕನಾಗಿದ್ದಾನೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)ಪ್ರವೀಣ್ ಸೂದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಪೈಶಾಚಿಕ ಕೃತ್ಯದಲ್ಲಿ ಭಾಗಿಯಾಗಿದ್ದ 6 ಆರೋಪಿಗಳ ಪೈಕಿ ಅಪ್ರಾಪ್ತ ಸೇರಿ 5 ಮಂದಿಯನ್ನು ಬಂಧಿಸಲಾಗಿದ್ದು ಅಪ್ರಾಪ್ತನಿಗೆ 17 ವರ್ಷವಾಗಿದೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು ಅದರ ಬಗ್ಗೆ ಖಚಿತಪಡಿಸಿಕೊಳ್ಳಬೇಕಾಗಿದೆ ಎಂದರು.
ಕೃತ್ಯದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಮತ್ತೊಬ್ಬ ಆರೋಪಿಯ ಬಂಧನ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಆರೋಪಿಗಳಲ್ಲಿ ಓರ್ವ 8 ಮತ್ತೋರ್ವ 7 ನೇ ತರಗತಿಯವರೆಗೆ ಓದಿದ್ದರೆ ಇನ್ನೋರ್ವ ಓದಿರಲಿಲ್ಲ, ಮರಗೆಲಸ ವೈರಿಂಗ್ ಚಾಲಕ ಹೀಗೆ ಕೂಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿಸಿದರು.


ಅಪರಾಧ ಕೃತ್ಯದಲ್ಲಿ 16 ವರ್ಷದ ಮೇಲ್ಮಟ್ಟವರನ್ನು ಕೂಡ ಇತರರಂತೆ ನ್ಯಾಯಾಲಯದ ವಿಚಾರಣೆಗೆ ಒಳಪಡಿಸುವ ಅವಕಾಶವಿದೆ ಅದರಂತೆ ಮೈಸೂರಿನ ಕೃತ್ಯದಲ್ಲಿ ಭಾಗಿಯಾದ ಅಪ್ರಾಪ್ತನ ವಯಸ್ಸಿನ ನಿಖರತೆ ಪಡೆದು ಮುಂದಿನ ತನಿಖೆಯನ್ನು ಕೈಗೊಳ್ಳಲಾಗುವುದು ಎಂದರು.


ಆರೋಪಿಗಳು ತಮಿಳುನಾಡಿನ ತಿರುಪ್ಪೂರು ತಾಳವಾಡಿ ತಾಲೂಕಿನವರಾಗಿದ್ದು ಆಗಾಗ ಮೈಸೂರಿನ ಎಪಿಎಂಸಿ ಬಂಡಿಪಾಳ್ಯದ ಮಾರುಕಟ್ಟೆಗೆ ಟಮೋಟೋ ಆಲೂಗಡ್ಡೆ ಇನ್ನಿತರ ತರಕಾರಿಗಳನ್ನು ತರುತ್ತಿದ್ದು ಎಲ್ಲರೂ ಸ್ನೇಹಿತರಾಗಿರುವ ಕಾರಣಕ್ಕೆ ವಾಹನಗಳಲ್ಲಿ ಬಂದು ಹೋಗುತ್ತಿದ್ದರು. ತರಕಾರಿ ವಿಲೇವಾರಿ ಮಾಡಿಕೊಂಡು ವಾಪಾಸು ಹೋಗುವಾಗ ಮದ್ಯ ಸೇವಿಸಿ ಪಾರ್ಟಿ ಮಾಡಿಕೊಂಡು ಹೋಗುತ್ತಿದ್ದರು ಎಂದು ವಿವರಿಸಿದರು. ಆರೋಪಿಗಳಲ್ಲಿ ಓರ್ವನನ್ನು ಬಂಧಿಸಲು ಹೋದಾಗ ತಿರುಪ್ಪೂರು ನಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದು ಆತನ ಬೆನ್ನತ್ತಿರುವ ಪೊಲೀಸ್ ತಂಡಗಳು ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದರು.


ಕ್ರಿಮಿನಲ್ ಹಿನ್ನೆಲೆ:
ಆರೋಪಿಗಳಿಗೆ ಅಪರಾಧ ಹಿನ್ನೆಲೆ ಇರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆ ಯಾಗಿದ್ದು ತಮಿಳುನಾಡಿನಲ್ಲಿ ಸಣ್ಣಪುಟ್ಟ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಬಂಧನಕ್ಕೆ ರಚಿಸಲಾಗಿದ್ದ ನಗರ ಹಾಗೂ ದಕ್ಷಿಣ ವಲಯ ಪೊಲೀಸರ 7 ವಿಶೇಷ ತಂಡಗಳು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು ಅವರನ್ನು ನಗರಕ್ಕೆ ಕರೆತಂದು ವಿಚಾರಣೆ ನಡೆಸಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದರು.


ಸಂತ್ರಸ್ತೆಯಿಂದ ಸಿಗದ ಸಹಕಾರ:

ಪ್ರಕರಣದ ತನಿಖೆಯಲ್ಲಿ ಸಂತ್ರಸ್ತೆಯಿಂದ ಯಾವುದೇ ರೀತಿಯ ಮಾಹಿತಿ ದೊರೆಯಲಿಲ್ಲ ನಾವ್ಯಾರೂ ಆಕೆಯೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಅದು ಸಹಜ ಕೂಡ ಎಂದು ಡಿಜಿ ತಿಳಿಸಿದರು. ಆದರೆ ಸಂತ್ರಸ್ತೆಯ ಸ್ನೇಹಿತನಿಂದ ಅಲ್ಪಸ್ವಲ್ಪ ಮಾಹಿತಿ ದೊರೆಯಿತು, ಆದರೆ ಅದು ಕೂಡ ಅಸ್ಪಷ್ಟವಾಗಿತ್ತು ಅದನ್ನಿಟ್ಟುಕೊಂಡು ತಾಂತ್ರಿಕ ವೈಜ್ಞಾನಿಕ ಆಧಾರದ ಮೇಲೆ ತನಿಖೆಯನ್ನು ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.


ಆರೋಪಿಗಳು ಸಂಚು ರೂಪಿಸಿದರೆ ಅತಾಚುರ್ಯದಿಂದ ಕೃತ್ಯ ನಡೆಯಿತೇ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ ಆದರೆ ಹೇಗಾದರೂ ನಡೆಯಲಿ ಅದು ಪೈಶಾಚಿಕ ಕೃತ್ಯ ಎಂದು ಹೇಳಿದರು. ಕೃತ್ಯ ನಡೆಸಿದ ಆರೋಪಿಗಳು ರಾಬರಿ ಮಾಡಲು 3 ಲಕ್ಷ ಕೇಳಿದ್ದರು ಸ್ನೇಹಿತನ ತಂದೆಯಿಂದ ಹಣ ತರಿಸುವ ಪ್ರಯತ್ನ ನಡೆದಿತ್ತಾದರೂ ಅದು ವಿಫಲವಾಗಿದೆ ಎಂದರು.


ಆರೋಪಿಗಳು ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನ ಚಲನವಲನದ ಮೇಲೆ ನಿಗಾವಹಿಸಿದ್ದರು. ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತ 3 ದಿನಗಳ ಕಾಲ ಒಂದೇ ಸ್ಥಳಕ್ಕೆ ಬರುತ್ತಿರುವುದನ್ನು ಗಮನಿಸಿ 3 ದಿನಗಳಿಂದ ಹಿಂಬಾಲಿಸಿ ಸಂಚು ರೂಪಿಸಿ ನಾಲ್ಕನೇ ದಿನ ಆ.24 ರಂದು ದಾಳಿ ನಡೆಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಿದರು.


5ಲಕ್ಷ ಬಹುಮಾನ:

ಆರೋಪಿಗಳನ್ನು ಸುಮಾರು 30 ಗಂಟೆಗಳೊಳಗೆ ಬಂಧಿಸಿದ ಪೊಲೀಸ್ ತಂಡಗಳಿಗೆ 5ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ ಎಂದರು. ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಬಂಧಿಸಿರುವುದನ್ನು ಮೈಸೂರಿನಲ್ಲಿಯೇ ಇದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಬೆಳಿಗ್ಗೆ ಖಚಿತ ಪಡಿಸಿದ್ದರು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದ್ದಾರೆ.


ಚಾಮುಂಡಿ ಬೆಟ್ಟದ ತಪ್ಪಲಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಸ್ಥಳಕಯ ನಿನ್ನೆ ಬೆಳಿಗ್ಗೆಯೇ ಭೇಟಿ ಅಲ್ಲಿಯೇ ಉಳಿದುಕೊಂಡು ಅಧಿಕಾರಿಗಳ ಸಭೆ ನಡೆಸಿ ಸತತ ಮಾಹಿತಿಯನ್ನು ಪಡೆಯುತ್ತಿದ್ದ ಸಚಿವರು ಇಂದು ಬೆಳಿಗ್ಗೆ ಸುದ್ದಿಗಾರರ ಜೊತೆ ಮಾತನಾಡಿ ಕಾಮುಕರನ್ನು ಬಂಧಿಸಿ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ ಎಂದಿದ್ದರು

Join Whatsapp
Exit mobile version